ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್ನಲ್ಲಿ ತಡಬಡಿಸಿದ ನಟ ಚಿಕ್ಕಣ್ಣ! ಯಶಸ್ ಸೂರ್ಯ ಹೇಳಿದ್ದೇನು?

Must read

ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್ನಲ್ಲಿ ತಡಬಡಿಸಿದ ನಟ ಚಿಕ್ಕಣ್ಣ! ಯಶಸ್ ಸೂರ್ಯ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಪ್ರಕರಣದ ಪ್ರಮುಖ ಸಾಕ್ಷಿಗಳಾದ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಿದ್ದಾರೆ. ಈ ವೇಳೆ ಸಾಕ್ಷಿ ಹೇಳುವಾಗ ನಟ ಚಿಕ್ಕಣ್ಣ ತಡಬಡಿಸಿದ್ದು, ಅವರಿಗೆ ವಿಶ್ರಾಂತಿ ಪಡೆಯುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ನಡೆದ ದಿನದಂದು ನಟ ದರ್ಶನ್ ಹಾಗೂ ಅವರ ತಂಡದೊಂದಿಗೆ ರೆಸ್ಟೋರೆಂಟ್ನಲ್ಲಿ ಇದ್ದ ಕಾರಣಕ್ಕೆ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ಆತಂಕಗೊಂಡಂತೆ ಕಂಡುಬಂದಿದ್ದು, ಮಾತನಾಡಲು ತಡಬಡಿಸಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ನ್ಯಾಯಾಧೀಶರು, ಸ್ವಲ್ಪ ಸಮಯ ವಿಶ್ರಾಂತಿ ಪಡೆದು ನಂತರ ಸಾಕ್ಷ್ಯ ನೀಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು ಎಂದು ವರದಿಯಾಗಿದೆ.
ಚಿಕ್ಕಣ್ಣ ಅವರ ಬಳಿಕ ಸಾಕ್ಷ್ಯ ನೀಡಿದ ನಟ ಯಶಸ್ ಸೂರ್ಯ, ದರ್ಶನ್ ಅವರೊಂದಿಗಿನ ಹಲವು ವರ್ಷಗಳ ಪರಿಚಯದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. 2010ರ ‘ಚಿಂಗಾರಿ’ ಸಿನಿಮಾದಿಂದ ದರ್ಶನ್ ಅವರ ಪರಿಚಯವಿದ್ದು, ಬಳಿಕ ‘ಕುರುಕ್ಷೇತ್ರ’, ‘ಚಕ್ರವರ್ತಿ’, ‘ಒಡೆಯ’ ಹಾಗೂ ‘ಗರಡಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ.
ಘಟನೆ ನಡೆದ ದಿನದಂದು ದರ್ಶನ್ ಅವರೊಂದಿಗೆ ಸ್ಟೋನಿಬ್ರೂಕ್ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ್ದಾಗಿ ಯಶಸ್ ಸೂರ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಊಟದ ಸಂದರ್ಭದಲ್ಲಿ ಸಿನಿಮಾ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆದಿದ್ದು, ಬೇರೆ ಯಾವುದೇ ವಿಷಯದ ಕುರಿತು ಮಾತನಾಡಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಊಟ ಮುಗಿದ ತಕ್ಷಣವೇ ತಾವು ರೆಸ್ಟೋರೆಂಟ್ನಿಂದ ಹೊರಟು ಹೋಗಿದ್ದಾಗಿ ಯಶಸ್ ಸೂರ್ಯ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದ್ದು, ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ನೀಡಿರುವ ಸಾಕ್ಷ್ಯಗಳು ವಿಚಾರಣೆಯ ಭಾಗವಾಗಿವೆ. ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಇತರ ಸಾಕ್ಷಿಗಳ ಹೇಳಿಕೆಗಳನ್ನೂ ನ್ಯಾಯಾಲಯ ಪರಿಶೀಲಿಸಲಿದೆ.

- Advertisement -spot_img

More articles

- Advertisement -spot_img

Latest article