ಕೆಪಿಎಸ್ಸಿ ಹಗರಣ: ಬಸವರಾಜ್ ಕನ್ನಾಳೆಗೆ 5 ದಿನಗಳ ಷರತ್ತುಬದ್ಧ ಜಾಮೀನು
ಬೆಂಗಳೂರು: ಕೆಪಿಎಸ್ಸಿ ಅಕ್ರಮ ಪ್ರಕರಣದ ಆರೋಪಿ ಬಸವರಾಜ್ ಕನ್ನಾಳೆಗೆ ಹೈಕೋರ್ಟ್ ಐದು ದಿನಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾನವೀಯತೆಯ ಆಧಾರದ ಮೇಲೆ ಜಾಮೀನು ನೀಡುವಂತೆ ಕನ್ನಾಳೆ ಪರ ವಕೀಲರು ಮನವಿ ಮಾಡಿದ್ದರು.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. 12 ದಿನಗಳ ಮಗುವಿನ ನಾಮಕರಣ ಕಾರ್ಯಕ್ರಮ ನೆರವೇರಿಸುವ ಅಗತ್ಯವಿರುವುದರಿಂದ ಒಂದು ವಾರದ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಯಿತು. ವಾದ ಆಲಿಸಿದ ನ್ಯಾಯಾಲಯವು ಐದು ದಿನಗಳ ಜಾಮೀನು ಮಂಜೂರು ಮಾಡಿದೆ.
ಪೊಲೀಸರ ಕಣ್ಗಾವಲಿನಲ್ಲಿ ತೆರಳಲು ಸೂಚನೆ
ಅಕ್ಟೋಬರ್ 15ರಿಂದ 20ರವರೆಗೆ ಜಾಮೀನು ಮಂಜೂರು ಮಾಡಲಾಗಿದ್ದು, ಈ ಅವಧಿಯಲ್ಲಿ ಕನ್ನಾಳೆ ಪಾಲಿಸಬೇಕಾದ ಹಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
• ಪೊಲೀಸರ ಜೊತೆಯಲ್ಲಿಯೇ ಪ್ರಯಾಣಿಸಬೇಕು.
• ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.
• ಐದು ದಿನಗಳ ಅವಧಿಯಲ್ಲೇ ಮಗುವಿನ ನಾಮಕರಣ ಕಾರ್ಯಕ್ರಮ ಪೂರ್ಣಗೊಳಿಸಬೇಕು.
• ಒಬ್ಬರೇ ತೆರಳಲು ಅನುಮತಿ ಇರುವುದಿಲ್ಲ.
• ಬೀದರ್ಗೆ ಪೊಲೀಸರೇ ಕರೆದೊಯ್ಯಬೇಕು.
• ಬೇರೆ ಯಾರನ್ನೂ ಭೇಟಿಯಾಗುವಂತಿಲ್ಲ.
ಇದಲ್ಲದೆ, ಪೊಲೀಸರು ಇಲ್ಲದ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು ಎಂಬ ಷರತ್ತನ್ನೂ ವಿಧಿಸಲಾಗಿದೆ. ಕನ್ನಾಳೆ ಮನೆ ಅಥವಾ ಆಸ್ಪತ್ರೆಗೆ ಪೊಲೀಸರು ತೆರಳುವಂತಿಲ್ಲ ಎಂಬ ಸೂಚನೆಯನ್ನೂ ನ್ಯಾಯಾಲಯ ನೀಡಿದೆ ಎಂದು ವರದಿಯಾಗಿದೆ.



