ಪಬ್ ನಲ್ಲಿ ಐಡಿ ಕಾರ್ಡ್ ಕೇಳಿದ್ದಕ್ಕೆ ಇನ್ ಸ್ಪೆಕ್ಟರ್ ಕಪಾಳಕ್ಕೆ ಬಾರಿಸಿದ ಐಎಎಸ್ ಅಧಿಕಾರಿ!
ಬೆಂಗಳೂರು: ಸಿಲಿಕಾನ್ ಸಿಟಿಯ ಪಬ್‌ವೊಂದರಲ್ಲಿ ಮಧ್ಯರಾತ್ರಿ ಐಎಎಸ್ ಅಧಿಕಾರಿಯೊಬ್ಬರು ಹೈಡ್ರಾಮಾ ನಡೆಸಿರುವ ಆರೋಪ ಕೇಳಿಬಂದಿದೆ. ಐಡಿ ಕಾರ್ಡ್ ಕೇಳಿದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ (ಕಡ ಪ್ರಾಜೆಕ್ಟ್ ಡೈರೆಕ್ಟರ್) ಕಾರ್ಯನಿರ್ವಹಿಸುತ್ತಿರುವ ವಿಕಾಸ್ ಮರ್ಮಠ್, ತಮ್ಮ ಸ್ನೇಹಿತರಾದ ನಿತೇಶ್, ಅಭಯ್ ಉದಯ್ ಸಿಂಗ್ ಹಾಗೂ ರೋಷನ್ ಅವರೊಂದಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ‘ಕಾವೂರ್’ ಪಬ್‌ಗೆ ತೆರಳಿದ್ದರು ಎನ್ನಲಾಗಿದೆ.
ಐಡಿ ಕಾರ್ಡ್ ಕೇಳಿದ್ದಕ್ಕೆ ಪೊಲೀಸ್ ಅಧಿಕಾರಿಗೇ ಕಪಾಳಮೋಕ್ಷ?
ರಾತ್ರಿ ಸುಮಾರು 1:30ರ ವೇಳೆಗೆ ಸಿಸಿಬಿ ಅಧಿಕಾರಿಗಳು ಪಬ್ ಪರಿಶೀಲನೆಗಾಗಿ ಸ್ಥಳಕ್ಕೆ ಆಗಮಿಸಿದ್ದರು. ನಿಯಮಿತ ತಪಾಸಣೆಯ ಭಾಗವಾಗಿ ಅಧಿಕಾರಿಗಳು ಗುರುತಿನ ಚೀಟಿ ಕೇಳಿದಾಗ ವಿಕಾಸ್ ಮರ್ಮಠ್ ಆಕ್ರೋಶಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಅವರ ವರ್ತನೆಯನ್ನು ಪ್ರಶ್ನಿಸಿದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
‘ನಾನು ಐಎಎಸ್ ಅಧಿಕಾರಿ, ಏನು ಮಾಡ್ತೀರೋ ನೋಡೋಣ!’
ಹಲ್ಲೆಯ ಆರೋಪದ ಜೊತೆಗೆ, ‘ನಾನು ಐಎಎಸ್ ಅಧಿಕಾರಿ, ನಿಮ್ಮಿಂದ ಏನು ಮಾಡಲು ಸಾಧ್ಯವೋ ನೋಡಿಕೊಳ್ಳಿ’ ಎಂದು ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ಸಂಬಂಧ ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಆಧಾರದಲ್ಲಿ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.



