ಮಗನ ಫೋಟೋ ಪ್ರದರ್ಶನಕ್ಕೆ ಸೆನ್ಸಾರ್ ಆರೋಪ: ರೈಹಾನ್ ವಾದ್ರಾ ಬೆನ್ನಿಗೆ ನಿಂತ ಪ್ರಿಯಾಂಕಾ ಗಾಂಧಿ!
ದೆಹಲಿಯಲ್ಲಿ ಮಗನ ಫೋಟೋ ಪ್ರದರ್ಶನಕ್ಕೆ ಸೆನ್ಸಾರ್ ಆರೋಪ ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೆಂಡಾಮಂಡಲವಾಗಿದ್ದಾರೆ. ಪ್ರತಿಭಟನೆಗಳ ಫೋಟೋಗಳನ್ನು ಪ್ರದರ್ಶನದಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಪುತ್ರ ರೈಹಾನ್ ವಾದ್ರಾ ಆರೋಪಿಸಿದ್ದು, ಇದೀಗ ಮಗನ ಬೆಂಬಲಕ್ಕೆ ಪ್ರಿಯಾಂಕಾ ಗಾಂಧಿ ನಿಂತಿದ್ದಾರೆ. ಅಧಿಕಾರದಲ್ಲಿರುವವರಿಗೆ ಮತ್ತೊಬ್ಬರ ಅಭಿವ್ಯಕ್ತಿಯ ಬಗ್ಗೆ ಭಯವೇಕೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಹೌದು… ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಒಬ್ಬ ಛಾಯಾಗ್ರಾಹಕ ಹಾಗೂ ಕಲಾವಿದ. ದೆಹಲಿಯ ಬಿಕಾನೇರ್ ಹೌಸ್ನಲ್ಲಿ ‘ನೋ ಐಡಿಯಾ ಇಸ್ ಫೈನಲ್’ ಎಂಬ ಹೆಸರಿನಲ್ಲಿ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದರು. ಈ ಪ್ರದರ್ಶನದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಫೋಟೋಗಳನ್ನೂ ಇರಿಸಲಾಗಿತ್ತು.
ಆದರೆ ಬುಧವಾರ ಮಧ್ಯಾಹ್ನ ಸುಮಾರು 3.30ಕ್ಕೆ ಬಿಕಾನೇರ್ ಹೌಸ್ ಆಡಳಿತದಿಂದ ಕೆಲವು ಫೋಟೋಗಳನ್ನು ತೆಗೆದುಹಾಕುವಂತೆ ಸೂಚನೆ ಬಂದಿದೆ ಎಂದು ರೈಹಾನ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸಂಜೆ 5 ಗಂಟೆಯೊಳಗೆ ಆ ಚಿತ್ರಗಳನ್ನು ತೆಗೆಯದಿದ್ದರೆ ಇಡೀ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ರೈಹಾನ್ ವಾದ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಫೋಟೋಗಳ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಕ್ಯಾಮೆರಾದಲ್ಲಿ ದಾಖಲಿಸುವುದು ಒಬ್ಬ ಕಲಾವಿದನಾಗಿ ನನ್ನ ಕರ್ತವ್ಯ. ಆದರೆ ಪ್ರತಿಭಟನೆಗಳ ಚಿತ್ರಗಳನ್ನು ಪ್ರದರ್ಶಿಸಲು ಇದು ಸರಿಯಾದ ಸಮಯವಲ್ಲ ಎಂದು ಹೇಳುತ್ತಿದ್ದಾರೆ. ಕೊನೆಗೆ ಭಾರತದ ರಾಷ್ಟ್ರಧ್ವಜದ ಚಿತ್ರವನ್ನೂ ತೆಗೆದುಹಾಕುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಮಗನ ಈ ಆರೋಪದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಮಗನ ಬಗ್ಗೆ ನನಗೆ ಯಾವಾಗಲೂ ಹೆಮ್ಮೆಯಿದೆ. ನೀನು ಸತ್ಯದ ಪರವಾಗಿ ನಿಲ್ಲು, ಸುಂದರವಾದದ್ದೆಲ್ಲವೂ ನಿನ್ನನ್ನು ಹುಡುಕಿಕೊಂಡು ಬರುತ್ತದೆ ಎಂದು ಮಗನಿಗೆ ಧೈರ್ಯ ತುಂಬಿದ್ದಾರೆ.
ಇಷ್ಟಕ್ಕೇ ನಿಲ್ಲದ ಪ್ರಿಯಾಂಕಾ ಗಾಂಧಿ, ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ಮತ್ತೊಬ್ಬರ ಅಭಿವ್ಯಕ್ತಿಗೆ ಹೆದರಿದಾಗ, ತಾವು ರಕ್ಷಿಸಲು ಪ್ರಯತ್ನಿಸುತ್ತಿರುವ ಅಧಿಕಾರವನ್ನೇ ಈಗಾಗಲೇ ಕಳೆದುಕೊಂಡಿರುತ್ತಾರೆ ಎಂಬ ಅರ್ಥದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ, ಪ್ರದರ್ಶನದ ಸಂಪೂರ್ಣ ವಿವರ ಹಾಗೂ ವಿನ್ಯಾಸವನ್ನು ಮೊದಲೇ ಬಿಕಾನೇರ್ ಹೌಸ್ ಆಡಳಿತಕ್ಕೆ ಸಲ್ಲಿಸಲಾಗಿತ್ತು ಎಂದು ರೈಹಾನ್ ತಿಳಿಸಿದ್ದಾರೆ. ಆದರೂ ಕೊನೆಯ ಕ್ಷಣದಲ್ಲಿ ಫೋಟೋಗಳನ್ನು ತೆಗೆದುಹಾಕುವಂತೆ ಸೂಚಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಬಗ್ಗೆ ಬಿಕಾನೇರ್ ಹೌಸ್ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ವರದಿಯಾಗಿದೆ.



