ಟಿಬೆಟ್ನಲ್ಲಿ 7.0 ತೀವ್ರತೆಯ ಭೀಕರ ಭೂಕಂಪ: 18 ಮಂದಿ ದಫನ್, 300ಕ್ಕೂ ಹೆಚ್ಚು ಮನೆಗಳು ನೆಲಸಮ!
ಚೀನಾ: ಚೀನಾದ ದೂರದ ಪರ್ವತ ಪ್ರಾಂತ್ಯವಾದ ಟಿಬೆಟ್ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ 7.0 ತೀವ್ರತೆಯ ಭೀಕರ ಭೂಕಂಪಕ್ಕೆ ಕನಿಷ್ಠ 18 ಜನರು ಸಜೀವವಾಗಿ ದಫನಗೊಂಡಿದ್ದು, 46ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ.
190 ಕಿ.ಮೀ ದೂರದಲ್ಲಿದ್ದ ಕೇಂದ್ರಬಿಂದು: ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಗುರುವಾರ ರಾತ್ರಿ 10:33ಕ್ಕೆ (ಸ್ಥಳೀಯ ಕಾಲಮಾನ) ಭೂಮಿ ಪ್ರಬಲವಾಗಿ ಕಂಪಿಸಿದೆ. ಈ ಭೂಕಂಪದ ಕೇಂದ್ರಬಿಂದು ನಾಗ್ಕ್ವು ನಗರದಿಂದ ಪೂರ್ವ-ಈಶಾನ್ಯಕ್ಕೆ ಸುಮಾರು 190 ಕಿಲೋಮೀಟರ್ ಹಾಗೂ ಟಿಬೆಟ್ನ ರಾಜಧಾನಿ ಲಾಸಾದಿಂದ ಈಶಾನ್ಯಕ್ಕೆ ಸುಮಾರು 390 ಕಿಲೋಮೀಟರ್ ದೂರದ ಪರ್ವತ ಪ್ರದೇಶದಲ್ಲಿದೆ ಎಂದು ಗುರುತಿಸಲಾಗಿದೆ.
339 ಮನೆಗಳು ಧ್ವಂಸ – ಭೀಕರ ದೃಶ್ಯಗಳು ಲಭ್ಯ: ಭೂಕಂಪದ ತೀವ್ರತೆಗೆ ಸುಮಾರು 339 ಮನೆಗಳು ಸಂಪೂರ್ಣವಾಗಿ ಹಾಗೂ ಭಾಗಶಃ ಕುಸಿದುಬಿದ್ದಿವೆ. ಗಾಯಗೊಂಡಿರುವ 46 ಮಂದಿಯಲ್ಲಿ 11 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭೂಕಂಪನದ ಆಘಾತಕ್ಕೆ ರೆಸ್ಟೋರೆಂಟ್ಗಳು, ಮನೆಗಳು ಹಾಗೂ ಅಂಗಡಿಗಳಿಂದ ಜನ ಪ್ರಾಣಭಯದಿಂದ ಬೀದಿಗೆ ಓಡಿಬಂದಿದ್ದಾರೆ.
ಸೂಪರ್ಮಾರ್ಕೆಟ್ಗಳ ಕಪಾಟುಗಳಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿರುವ ಮತ್ತು ವಿದ್ಯುತ್ ಕಂಬಗಳು ಅಲುಗಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಅವಶೇಷಗಳನ್ನು ತೆರವುಗೊಳಿಸಲು ಹಾಗೂ ಗಾಯಾಳುಗಳನ್ನು ರಕ್ಷಿಸಲು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.
ಭಾರತದ ಗಡಿ ಭಾಗದಲ್ಲೂ ಕಂಪನದ ಅನುಭವ: ಟಿಬೆಟ್ನಲ್ಲಿ ಮುಖ್ಯ ಭೂಕಂಪ ಸಂಭವಿಸಿದ ಬೆನ್ನಲ್ಲೇ, ಭಾರತೀಯ ಕಾಲಮಾನ (IST) ರಾತ್ರಿ ಸುಮಾರು 8:29ಕ್ಕೆ ಚೀನಾ ಭಾಗದಲ್ಲಿ 5.2 ತೀವ್ರತೆಯ ಮತ್ತೊಂದು ಭೂಕಂಪನ ದಾಖಲಾಗಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿದ ಮಾಹಿತಿಯ ಪ್ರಕಾರ, ಇದು ಅರುಣಾಚಲ ಪ್ರದೇಶದ ಪ್ಯಾಂಗಿನ್ನಿಂದ ವಾಯುವ್ಯಕ್ಕೆ 505 ಕಿಲೋಮೀಟರ್ ದೂರದಲ್ಲಿ, ಭೂಮಿಯ 15 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಗಡಿ ಭಾಗದ ಜನರಿಗೂ ಕಂಪನದ ಅನುಭವವಾಗಿದೆ.



