ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ, ಕೆಲವು ಸ್ಟಿಂಗ್ ಆಪರೇಷನ್ ಗಳೂ ನಡೆದಿವೆ! ಯತ್ನಾಳ್ ಸ್ಫೋಟಕ ಆರೋಪ
ನವದೆಹಲಿ: ಕರ್ನಾಟಕ ರಾಜಕೀಯದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್ ವಿವಾದ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿದ್ದು, ಅವುಗಳಲ್ಲಿ ಒಂದು ಬಿಜೆಪಿಯಲ್ಲಿಯೇ ಇದೆ. ಅಲ್ಲಿಯೂ ಕೆಲವು ಸ್ಟಿಂಗ್ ಆಪರೇಷನ್ಗಳು ನಡೆದಿದ್ದು, ಆ ವಿಡಿಯೋಗಳು ಯಾವಾಗ ಹೊರಬರುತ್ತವೆ ಎಂಬುದನ್ನು ಕಾದುನೋಡಬೇಕು ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂದು ತಾವು ಬಹಳ ಹಿಂದೆಯೇ ಹೇಳಿದ್ದೆ. ಅವುಗಳಲ್ಲಿ ಒಂದು ಯಾವುದು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಆದರೆ ಮತ್ತೊಂದು ಸಿಡಿ ಫ್ಯಾಕ್ಟರಿ ಬಿಜೆಪಿಯಲ್ಲೂ ಇದೆ ಎಂದು ಆರೋಪಿಸಿದರು.
ರಾಜಕೀಯ ಎದುರಾಳಿಗಳನ್ನು ಮಣಿಸಲು ಹಾಗೂ ಭವಿಷ್ಯದಲ್ಲಿ ತಮ್ಮ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಭಾವಿಸುವವರನ್ನು ಬ್ಲ್ಯಾಕ್ಮೇಲ್ ಮಾಡಲು ಇಂತಹ ವಿಡಿಯೋಗಳನ್ನು ಬಳಸಲಾಗುತ್ತಿದೆ. ರಾಜಕೀಯದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್ಗಳನ್ನು ಬಳಸಿಕೊಂಡು ಬೆದರಿಕೆ ಹಾಕುವುದು ಒಂದು ವ್ಯವಹಾರವಾಗಿ ಬೆಳೆದಿದೆ ಎಂದು ಯತ್ನಾಳ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಹಲವು ತಂಡಗಳಿವೆ. ರಾಜಕೀಯಕ್ಕೆ ಯಾವುದೋ ನೆಪದಲ್ಲಿ ಪ್ರವೇಶಿಸುವ ಕೆಲವರು, ಜನಪ್ರತಿನಿಧಿಗಳ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಶಾಸಕರನ್ನೇ ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರ ಮೌನವನ್ನು ಯತ್ನಾಳ್ ಪ್ರಶ್ನಿಸಿದರು. ರಾಜ್ಯ ರಾಜಕೀಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರು ಈ ಬಗ್ಗೆ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸ್ಟಿಂಗ್ ಆಪರೇಷನ್ ವಿಚಾರವಾಗಿ ನಿರಂತರವಾಗಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಈ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡುತ್ತಿಲ್ಲ ಎಂದು ಯತ್ನಾಳ್ ಹೇಳಿದರು.
ರಾಜಕೀಯ ನಾಯಕರ ವಿರುದ್ಧ ರಹಸ್ಯ ವಿಡಿಯೋಗಳನ್ನು ಬಳಸಿಕೊಂಡು ಆರೋಪ ಮಾಡುವುದು ಹಾಗೂ ಬ್ಲ್ಯಾಕ್ಮೇಲ್ ಮಾಡುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಚಟುವಟಿಕೆಗಳು ರಾಜ್ಯ ರಾಜಕೀಯದ ಘನತೆಗೆ ಧಕ್ಕೆ ತರುತ್ತವೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆಯೂ ಯತ್ನಾಳ್ ಪ್ರತಿಕ್ರಿಯಿಸಿದರು. ರಾಜಕೀಯ ಎದುರಾಳಿಗಳನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳನ್ನು ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಆದರೆ ಈ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ ಅಥವಾ ಆರ್. ಅಶೋಕ್ ಸೇರಿದಂತೆ ಹಲವರ ಪಾತ್ರವಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದರು. ಅದೇ ರೀತಿ ಬೇರೆ ಪಕ್ಷದವರು ಅಥವಾ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಕೃತ್ಯ ನಡೆಸಿದ್ದಾರೆ ಎಂದು ತಾವು ಆರೋಪಿಸುತ್ತಿಲ್ಲ ಎಂದೂ ತಿಳಿಸಿದರು.



