ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ವಕೀಲ ಸುಧೀರ್ ಸಾವಿಗೆ ಸಂಬಂಧಿಕರ ಕಣ್ಣೀರು
ದಾವಣಗೆರೆ: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಹೈಕೋರ್ಟ್ ವಕೀಲ ಸುಧೀರ್ ಕೆ. ಅವರ ಅಗಲಿಕೆಯಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಇಂದು ಸುಧೀರ್ ಅವರ ಚಿಕ್ಕಪ್ಪನ ಮಗನ ಮದುವೆ ನಿಗದಿಯಾಗಿದ್ದು, ಮದುವೆಗೆ ಬರುವುದಾಗಿ ಹೇಳಿದ್ದ ಸುಧೀರ್ ದುರಂತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ.
ಮೃತ ಸುಧೀರ್ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದವರಾಗಿದ್ದು, ವೃತ್ತಿಯ ಕಾರಣದಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಹಬ್ಬಗಳು ಹಾಗೂ ಕುಟುಂಬದ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ಹುಟ್ಟೂರಿಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಮಹಾಲಯ ಅಮಾವಾಸ್ಯೆಯ ದಿನದಂದು ಗ್ರಾಮಕ್ಕೆ ಆಗಮಿಸಿದ್ದರು. ಇದೀಗ ಅವರ ಅಕಾಲಿಕ ನಿಧನದಿಂದ ತ್ಯಾವಣಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಸುಧೀರ್ ಅವರು ಗ್ರಾಮಕ್ಕೆ ಬಂದಾಗ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಯಾರಿಗಾದರೂ ಕಷ್ಟ ಎದುರಾದರೆ ನೆರವಿಗೆ ನಿಲ್ಲುತ್ತಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಸಂಬಂಧಿಕರು ನೆನಪಿಸಿಕೊಂಡಿದ್ದಾರೆ.
ಇಂದು ನಡೆಯಲಿರುವ ಚಿಕ್ಕಪ್ಪನ ಮಗನ ಮದುವೆಗೆ ಬರುವುದಾಗಿ ಸುಧೀರ್ ಮೊದಲೇ ತಿಳಿಸಿದ್ದರು. ಮದುವೆಯಲ್ಲಿ ಎಲ್ಲರನ್ನೂ ಭೇಟಿಯಾಗಿ ಖುಷಿಯಾಗಿ ಮಾತನಾಡೋಣ ಎಂದು ಹೇಳಿದ್ದರು. ಆದರೆ ಅಷ್ಟರಲ್ಲೇ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, ಸುಧೀರ್ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದು ಕುಟುಂಬಸ್ಥರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.
‘ಮದುವೆಗೆ ಬರುತ್ತೇನೆ, ಎಲ್ಲರೂ ಸಿಗೋಣ, ಖುಷಿಯಾಗಿ ಮಾತನಾಡೋಣ ಎಂದು ಹೇಳಿದ್ದರು. ಆದರೆ ಈಗ ಅವರೇ ಇಲ್ಲ. ಏನು ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ’ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.
ಮದುವೆಯ ಸಂಭ್ರಮದಲ್ಲಿರಬೇಕಿದ್ದ ಕುಟುಂಬದಲ್ಲಿ ಇದೀಗ ಶೋಕದ ವಾತಾವರಣ ನಿರ್ಮಾಣವಾಗಿದೆ. ಸುಧೀರ್ ಅವರ ಅಕಾಲಿಕ ಅಗಲಿಕೆಯಿಂದ ಕುಟುಂಬಸ್ಥರು, ಸಂಬಂಧಿಕರು ಹಾಗೂ ತ್ಯಾವಣಿಗೆ ಗ್ರಾಮದ ಜನರು ದುಃಖಿತರಾಗಿದ್ದಾರೆ.



