ಸ್ಟಿಂಗ್ ಆಪರೇಷನ್ ವಿವಾದ: ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಸಜ್ಜು; ಹೈಕಮಾಂಡ್ ಮುಂದೆ ಮಹತ್ವದ ಚರ್ಚೆ!

Must read

ಸ್ಟಿಂಗ್ ಆಪರೇಷನ್ ವಿವಾದ: ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಸಜ್ಜು; ಹೈಕಮಾಂಡ್ ಮುಂದೆ ಮಹತ್ವದ ಚರ್ಚೆ!

ನವದೆಹಲಿ: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪೊಲೀಸ್ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದಾರೆ. ಸಂಜೆ ಇಬ್ಬರು ನಾಯಕರ ನಡುವೆ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆಯಿದ್ದು, ರಾಜ್ಯದ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಆಂತರಿಕ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.
ಸ್ಟಿಂಗ್ ಆಪರೇಷನ್ ಹಿಂದಿನ ಷಡ್ಯಂತ್ರದ ಬಗ್ಗೆ ಚರ್ಚೆ?
ಮಹಿಳೆಯೊಬ್ಬರ ಸಂದರ್ಶನವನ್ನು ಮುಂದಿಟ್ಟುಕೊಂಡು ತಮ್ಮ ವಿರುದ್ಧ ಕಟ್ಟುಕಥೆ ಸೃಷ್ಟಿಸಲಾಗಿದೆ. ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ಪ್ರಕರಣಕ್ಕೆ ತಳುಕು ಹಾಕಿ ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸಲಾಗಿದೆ ಎಂಬ ವಿಚಾರವನ್ನು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಸ್ವಪಕ್ಷೀಯರೇ ಭಾಗಿಯಾಗಿರುವ ಶಂಕೆಯನ್ನೂ ಅವರು ಹೈಕಮಾಂಡ್ ಮುಂದೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಷಡ್ಯಂತ್ರ ರೂಪಿಸಲಾಗಿದೆ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಲಿದ್ದು, ಪ್ರಕರಣದ ಹಿಂದಿರುವ ನೈಜ ಸೂತ್ರಧಾರಿಗಳನ್ನು ಪತ್ತೆಹಚ್ಚುವಂತೆ ಒತ್ತಾಯಿಸುವ ನಿರೀಕ್ಷೆಯಿದೆ.
ಎರಡು ಸಚಿವ ಸ್ಥಾನಗಳ ಭರ್ತಿಗೂ ಚರ್ಚೆ!
ಸ್ಟಿಂಗ್ ಆಪರೇಷನ್ ವಿವಾದದ ಜೊತೆಗೆ ರಾಜ್ಯ ಸರ್ಕಾರದಲ್ಲಿ ಖಾಲಿ ಉಳಿದಿರುವ ಎರಡು ಸಚಿವ ಸ್ಥಾನಗಳ ಭರ್ತಿ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆಯಿದೆ. ಅಲ್ಲದೆ, ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಸಂಬಂಧ ಆಕಾಂಕ್ಷಿಗಳ ಪಟ್ಟಿಯ ಬಗ್ಗೆಯೂ ಇಬ್ಬರು ನಾಯಕರು ಸಮಾಲೋಚನೆ ನಡೆಸಬಹುದು ಎನ್ನಲಾಗಿದೆ.
ಇನ್ನು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಭೇಟಿಯಾಗಿದ್ದರು. ಆದರೆ, ಆ ಭೇಟಿಯು ಪ್ರತಿಭಟನೆಗೆ ಸಂಬಂಧಿಸಿದ ಚರ್ಚೆಗೆ ಮಾತ್ರ ಸೀಮಿತವಾಗಿತ್ತು.
ಹೀಗಾಗಿ ಇದೀಗ ನಡೆಯಲಿರುವ ಪ್ರತ್ಯೇಕ ಭೇಟಿ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

- Advertisement -spot_img

More articles

- Advertisement -spot_img

Latest article