ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರು ಪ್ರಸ್ತಾಪ: ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಮೊಬೈಲ್ ಹಸ್ತಾಂತರ?

Must read

ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರು ಪ್ರಸ್ತಾಪ: ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಮೊಬೈಲ್ ಹಸ್ತಾಂತರ?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ಬಳಕೆಯಾಗಿರುವ ಮೊಬೈಲ್ ಫೋನ್ಗಳನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿಯೇ ಹಸ್ತಾಂತರಿಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಬಂಧಿತ ಆರೋಪಿ ರಿತೇಶ್ ಪಾಂಡೆ ವಿಚಾರಣೆಯ ವೇಳೆ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 24ರಂದು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ರಿತೇಶ್ ಪಾಂಡೆಯನ್ನು ಬಂಧಿಸಿದ್ದು, ಆತನ ವಿಚಾರಣೆಯ ಆಧಾರದಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ರಿತೇಶ್ ಪಾಂಡೆ ಜೊತೆಗೆ ವಿನೋದ್ ಶರ್ಮಾ ಹಾಗೂ ಪ್ರಜ್ವಲ್ ಪ್ರಸಾದ್ ಎಂಬವರ ಹೆಸರುಗಳು ಕೇಳಿಬಂದಿವೆ. ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯ ಮೇರೆಗೆ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ದೆಹಲಿಯ ಕರೋಲ್ ಬಾಗ್ನಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿ ಫೋನ್ಗಳನ್ನು ಖರೀದಿಸಿದ್ದರು ಎನ್ನಲಾಗಿದೆ.
ಖರೀದಿಸಿದ ಮೊಬೈಲ್ ಫೋನ್ಗಳನ್ನು ನಂತರ ದೆಹಲಿಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಅಧಿಕೃತ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಯೇ ಪ್ರಜ್ವಲ್ ಪ್ರಸಾದ್ ಅವರಿಗೆ ಫೋನ್ಗಳನ್ನು ಹಸ್ತಾಂತರಿಸಲಾಗಿತ್ತು ಎಂದು ರಿತೇಶ್ ಪಾಂಡೆ ವಿಚಾರಣೆಯಲ್ಲಿ ಹೇಳಿರುವುದಾಗಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ಗಳ ಖರೀದಿ, ಹಸ್ತಾಂತರ ಹಾಗೂ ಸ್ಟಿಂಗ್ ವಿಡಿಯೋ ಅಪ್ಲೋಡ್ ಮಾಡಲು ಅವುಗಳನ್ನು ಬಳಸಲಾಗಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವರ ಅಧಿಕೃತ ನಿವಾಸದ ಹೆಸರು ಪ್ರಕರಣದಲ್ಲಿ ಪ್ರಸ್ತಾಪವಾಗಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಇದೇ ವೇಳೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ವಿನೋದ್ ಶರ್ಮಾ ಹಾಗೂ ಪ್ರಜ್ವಲ್ ಪ್ರಸಾದ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಇಬ್ಬರೂ ತನಿಖಾಧಿಕಾರಿಗಳ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಬಂಧನದಿಂದ ರಕ್ಷಣೆ ಪಡೆಯಲು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ, ಬಂಧಿತ ರಿತೇಶ್ ಪಾಂಡೆ ಹಾಗೂ ಪ್ರಜ್ವಲ್ ಪ್ರಸಾದ್ ನಡುವೆ ನಡೆದಿರುವ ಅನುಮಾನಾಸ್ಪದ ಹಣಕಾಸು ವಹಿವಾಟುಗಳ ಕುರಿತು ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಹಣ ವರ್ಗಾವಣೆ ನಡೆದಿರುವ ಉದ್ದೇಶ ಹಾಗೂ ಈ ವಹಿವಾಟುಗಳಿಗೆ ಸ್ಟಿಂಗ್ ಆಪರೇಷನ್ ಪ್ರಕರಣದೊಂದಿಗೆ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ರಿತೇಶ್ ಪಾಂಡೆ, ವಿನೋದ್ ಶರ್ಮಾ ಹಾಗೂ ಪ್ರಜ್ವಲ್ ಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ಗಳಾಗಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಈ ಮೂವರು ಯಾರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಿದ್ದರು? ಸ್ಟಿಂಗ್ ವಿಡಿಯೋ ಸಿದ್ಧಪಡಿಸುವುದು ಮತ್ತು ಅಪ್ಲೋಡ್ ಮಾಡುವುದರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಲು ಸಿಸಿಬಿ ತನಿಖೆ ಮುಂದುವರಿಸಿದೆ.
ವಿನೋದ್ ಶರ್ಮಾ ಹಾಗೂ ಪ್ರಜ್ವಲ್ ಪ್ರಸಾದ್ ವಿಚಾರಣೆಗೆ ಲಭ್ಯವಾದ ಬಳಿಕ ಪ್ರಕರಣದ ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article