ನಿಮ್ಮ ಬಳಿ ಟ್ರೇಲರ್ ಇರಬಹುದು, ನನ್ನ ಬಳಿ ಫುಲ್ ಪಿಕ್ಚರ್ ಇದೆ! ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಗುಡುಗು

Must read

ನಿಮ್ಮ ಬಳಿ ಟ್ರೇಲರ್ ಇರಬಹುದು, ನನ್ನ ಬಳಿ ಫುಲ್ ಪಿಕ್ಚರ್ ಇದೆ! ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಗುಡುಗು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ತಳುಕು ಹಾಕಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಪೊಲೀಸರು ನಡೆಸುತ್ತಿರುವ ತನಿಖೆಯ ದಿಕ್ಕನ್ನೇ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ನೀಡಿರುವ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಮಾರು 15 ದಿನಗಳ ಹಿಂದೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಆದರೆ ಆತನನ್ನು ಬಂಧಿಸಿದ್ದು ಎಲ್ಲಿ? ದೆಹಲಿಯಲ್ಲಿರುವ ನನ್ನ ನಿವಾಸದಲ್ಲಿಯೇ? ಅಥವಾ ಗಾಜಿಯಾಬಾದ್ನಲ್ಲಿಯೇ? ಎಂದು ಪ್ರಶ್ನಿಸಿದ್ದಾರೆ.
ಬಂಧಿತ ಆರೋಪಿಯ ವಿಳಾಸವನ್ನು ಗಾಜಿಯಾಬಾದ್ ಎಂದು ದಾಖಲಿಸಲಾಗಿದೆ. ಹೀಗಿರುವಾಗ ಆತನನ್ನು ತಮ್ಮ ಮನೆಯಲ್ಲಿ ಬಂಧಿಸಲಾಗಿದೆ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಆರೋಪಿಯ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳಿಗೂ ಪೊಲೀಸರ ಹೇಳಿಕೆಗಳಿಗೂ ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ ಸ್ಟಿಂಗ್ ವಿಡಿಯೋ ಪ್ರಕರಣದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಅವರ ಬಳಿ ಟ್ರೇಲರ್ ಇರಬಹುದು. ಆದರೆ ನನ್ನ ಬಳಿ ಫುಲ್ ಪಿಕ್ಚರ್ ಇದೆ. ನನ್ನ ಜೀವನದಲ್ಲಿ ಇಂತಹ ಟ್ರೇಲರ್ಗಳನ್ನು ಎಷ್ಟೋ ನೋಡಿದ್ದೇನೆ’ ಎಂದು ವ್ಯಂಗ್ಯವಾಡಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಕ್ಲೀನ್ಚಿಟ್ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ವಿಡಿಯೋದಲ್ಲಿನ ಆರೋಪಗಳು ಕಟ್ಟುಕಥೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಆದರೆ ವಿಡಿಯೋ ಚಿತ್ರೀಕರಣ ಮಾಡಿಸಿದವರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿಲ್ಲ. ವಿಡಿಯೋ ಸಿದ್ಧಪಡಿಸಿದವರನ್ನು ರಕ್ಷಿಸುವ ಉದ್ದೇಶದಿಂದಲೇ ತನಿಖೆ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸುವಂತೆ ತಾವೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಆದರೆ ಈಗ ತನಿಖೆ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಗೃಹ ಇಲಾಖೆಯ ಜವಾಬ್ದಾರಿಯಲ್ಲಿರುವವರಿಂದ ದಿನಕ್ಕೊಂದು ಹೇಳಿಕೆ ಬರುತ್ತಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಟಿಂಗ್ ವಿಡಿಯೋ ಚಿತ್ರೀಕರಣದ ಅವಧಿಯ ಬಗ್ಗೆಯೂ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತಿದ್ದಾರೆ. 2011ರಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಘಟನೆಗೆ ಸಂಬಂಧಿಸಿದ ವಿಡಿಯೋ 2026ರಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು ಹೇಗೆ? ಇಷ್ಟು ವರ್ಷಗಳ ಬಳಿಕ ಈ ವಿಡಿಯೋ ವೈರಲ್ ಆಗಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.
‘2011ರ ಘಟನೆಗೂ ಕುಮಾರಸ್ವಾಮಿ ಕಾರಣರಲ್ಲ. 2023ರ ಬೆಳವಣಿಗೆಗಳಿಗೂ ಕುಮಾರಸ್ವಾಮಿ ಕಾರಣರಲ್ಲ. ಆದರೂ ನನ್ನ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಕೃಪಾ ಆಳ್ವಾ ಅವರ ಪಾತ್ರದ ಬಗ್ಗೆಯೂ ಕುಮಾರಸ್ವಾಮಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಕೃಪಾ ಆಳ್ವಾ ಅವರೊಂದಿಗೆ ಸೇರಿ ವಿಡಿಯೋ ಸಿದ್ಧಪಡಿಸಿದ್ದು ಯಾರು? ಕೇರಳದ ಮಹಿಳೆಯೊಬ್ಬರನ್ನು ಕರೆಸಿ ಮಾತನಾಡಿಸಿದ್ದು ಯಾರು? ಆ ಮಹಿಳೆಗೆ ಪ್ರಶ್ನೆಗಳನ್ನು ಕೇಳಿದ ವ್ಯಕ್ತಿಯ ವಿಚಾರಣೆ ನಡೆದಿದೆಯೇ? ಎಂಬುದನ್ನು ಪೊಲೀಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೃಪಾ ಆಳ್ವಾ ಹಾಗೂ ಕೇರಳದ ಮಹಿಳೆಯ ನಡುವಿನ ಸಂಬಂಧವೇನು? ಆ ಮಹಿಳೆಯನ್ನು ಸಂಪರ್ಕಿಸಿದವರು ಯಾರು? ವಿಡಿಯೋ ಸಿದ್ಧಪಡಿಸುವ ಹಿಂದೆ ಯಾರ ಸೂಚನೆ ಇತ್ತು? ಎಂಬ ಪ್ರಶ್ನೆಗಳಿಗೂ ತನಿಖೆಯಿಂದ ಉತ್ತರ ಸಿಗಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸ್ಟಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದವರ ವಿರುದ್ಧ ಮಾತ್ರ ತನಿಖೆ ನಡೆಸುವುದರಿಂದ ಪ್ರಕರಣದ ಸಂಪೂರ್ಣ ಸತ್ಯ ಹೊರಬರುವುದಿಲ್ಲ. ವಿಡಿಯೋ ಚಿತ್ರೀಕರಣ, ಅದನ್ನು ಸಿದ್ಧಪಡಿಸಿದವರು ಹಾಗೂ ಪ್ರಸಾರಕ್ಕೆ ಕಾರಣರಾದ ಎಲ್ಲರ ಪಾತ್ರವನ್ನೂ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -spot_img

More articles

- Advertisement -spot_img

Latest article