ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ; ಪತ್ನಿ ಸೇರಿ ತವರು ಮನೆಯ ಆರು ಮಂದಿಯನ್ನು ಕೊಂದ ಆರೋಪದಲ್ಲಿ ಕ್ಯಾಬ್ ಚಾಲಕ ಅರೆಸ್ಟ್!
ಬೆಂಗಳೂರು: ಪತ್ನಿ ಹಾಗೂ ಆಕೆಯ ತವರು ಮನೆಯ ಆರು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕ ಇಂದುಶೇಖರ್ನನ್ನು ರಾಜಾಜಿನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೇವಲ 15ರಿಂದ 20 ದಿನಗಳ ಅವಧಿಯಲ್ಲಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ‘ಠಾಣಾ ವರದಿ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದ ಎನ್ನಲಾಗಿದೆ.
ತವರಿಗೆ ಹೋಗುತ್ತಿದ್ದ ಪತ್ನಿಯ ಮೇಲೆ ದ್ವೇಷ?
ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಿದ್ದ ಇಂದುಶೇಖರ್, ಸುಮಾರು ಎರಡು ದಶಕಗಳ ಹಿಂದೆ ಸುನೀತಾ ಅವರನ್ನು ವಿವಾಹವಾಗಿದ್ದ. ಸುನೀತಾ ಆಗಾಗ್ಗೆ ಶ್ರೀರಾಮಪುರದಲ್ಲಿರುವ ತವರು ಮನೆಗೆ ಹೋಗಿ ಬರುತ್ತಿದ್ದದ್ದು ಆತನಿಗೆ ಇಷ್ಟವಿರಲಿಲ್ಲ. ತವರಿಗೆ ಹೋಗದಂತೆ ಪತ್ನಿಗೆ ನಿರ್ಬಂಧ ವಿಧಿಸಿದ್ದ ಎನ್ನಲಾಗಿದೆ.
ಆದರೆ ಸುನೀತಾ ಅವರಿಗೆ ತಾಯಿ ಹಾಗೂ ಸೋದರರು ಬೆಂಬಲ ನೀಡುತ್ತಿದ್ದರು. ಈ ವಿಚಾರವಾಗಿ ಹಲವು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು. ಆದರೂ ದಂಪತಿ ನಡುವಿನ ಕಲಹ ಮುಂದುವರಿದಿತ್ತು. ತನ್ನ ಬದುಕಿಗೆ ಪತ್ನಿಯ ಕುಟುಂಬವೇ ಅಡ್ಡಿಯಾಗಿದೆ ಎಂದು ಭಾವಿಸಿದ್ದ ಆರೋಪಿ, ಅವರನ್ನೆಲ್ಲ ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊದಲು ಪತ್ನಿಯನ್ನೇ ಕೊಲೆ ಮಾಡಿದ್ದ ಆರೋಪಿ
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಮೊದಲು ಪತ್ನಿ ಸುನೀತಾ ಅವರ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ನಂದಿ ಬೆಟ್ಟಕ್ಕೆ ಕೊಂಡೊಯ್ದು ಎಸೆದಿದ್ದಾನೆ ಎನ್ನಲಾಗಿದೆ.
ಸುನೀತಾ ಅವರ ಮೊಬೈಲ್ ಸ್ವಿಚ್ ಆಫ್ ಮಾಡಿ, ಅವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ನೆರೆಹೊರೆಯವರು ಹಾಗೂ ಸಂಬಂಧಿಕರನ್ನು ನಂಬಿಸಿದ್ದ ಎನ್ನಲಾಗಿದೆ.
ಒಬ್ಬೊಬ್ಬರನ್ನೇ ಮನೆಗೆ ಕರೆಸಿ ಹತ್ಯೆ
ನಂತರ ಮನೆಯಲ್ಲೇ ಮದ್ಯದ ಪಾರ್ಟಿ ಮಾಡೋಣ ಎಂದು ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪವಿದೆ. ಬಳಿಕ ಶಂಕರ್ ಅವರ ಪತ್ನಿ ನಳಿನಿ, ಶಿವಕುಮಾರ್ ಅವರ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ ಶಂಕರ್ ಅವರ ಪುತ್ರ ಪುನೀತ್ ಅವರನ್ನು ಕೂಡ ಒಬ್ಬೊಬ್ಬರಾಗಿ ಮನೆಗೆ ಕರೆಸಿ ಕೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಯ ಬಳಿಕ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.
ರಕ್ತದ ಕಲೆ ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಕ್ಕೆ ಯತ್ನ?
ಕೃತ್ಯದ ಬಳಿಕ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸ್ವಚ್ಛಗೊಳಿಸಿದ್ದಾನೆ. ಹತ್ಯೆಗೆ ಬಳಸಿದ ರುಬ್ಬುಗುಂಡನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿದ್ದಾನೆ ಎನ್ನಲಾಗಿದೆ. ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರು ಹಾಗೂ ರುಬ್ಬುಗುಂಡನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಾಪತ್ತೆ ಪ್ರಕರಣದ ತನಿಖೆಯಿಂದ ಬಯಲಾದ ಕೃತ್ಯ
ಸುನೀತಾ ಕುಟುಂಬದವರು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಳಿನಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ಅನುಮಾನದ ಮೇರೆಗೆ ಇಂದುಶೇಖರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನೀಡಿದ ಹೇಳಿಕೆಗಳಲ್ಲಿ ಗೊಂದಲ ಕಂಡುಬಂದಿತ್ತು. ಬಳಿಕ ಮನೆ ಪರಿಶೀಲನೆ ನಡೆಸಿದಾಗ ಕೊಲೆಗೆ ಸಂಬಂಧಿಸಿದ ಸುಳಿವುಗಳು ಪತ್ತೆಯಾಗಿದ್ದವು. ತೀವ್ರ ವಿಚಾರಣೆಯ ವೇಳೆ ಆರೋಪಿ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂದಿ ಬೆಟ್ಟದಲ್ಲಿ ಮೃತದೇಹಕ್ಕಾಗಿ ಶೋಧ
ಆರೋಪಿಯನ್ನು ನಂದಿ ಬೆಟ್ಟಕ್ಕೆ ಕರೆದೊಯ್ದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ಗಂಟೆಗಳ ಹುಡುಕಾಟದ ಬಳಿಕ ಪುನೀತ್ ಅವರ ಮೃತದೇಹ ಪತ್ತೆಯಾಗಿದೆ. ಉಳಿದವರ ಮೃತದೇಹಗಳಿಗಾಗಿ ಶೋಧ ಮುಂದುವರಿದಿದೆ.
ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ತಂಡ ರಚಿಸಲಾಗಿದ್ದು, ಪ್ರಕರಣದ ಸಂಪೂರ್ಣ ತನಿಖೆ ಮುಂದುವರಿದಿದೆ.



