ಕನ್ನಡ ಸಾಹಿತ್ಯ ಲೋಕಕ್ಕೆ ಆಘಾತ: ಹಿರಿಯ ಭಾಷಾವಿಜ್ಞಾನಿ, ಚಿಂತಕ ಪ್ರೊ. ಕೆ.ವಿ. ನಾರಾಯಣ ನಿಧನ!
ಬೆಂಗಳೂರು: ಕನ್ನಡದ ಖ್ಯಾತ ಚಿಂತಕ, ಭಾಷಾವಿಜ್ಞಾನಿ ಹಾಗೂ ಹಿರಿಯ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ (79) ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದ ಅವರಿಗೆ ಗುರುವಾರ ತಡರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಎಚ್.ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯ, ಭಾಷಾವಿಜ್ಞಾನ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.
1948ರಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಜನಿಸಿದ ಕೆ.ವಿ. ನಾರಾಯಣ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಸಂಶೋಧನೆ ಪೂರ್ಣಗೊಳಿಸಿದ್ದರು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಭಾಷಾವಿಜ್ಞಾನ ಮತ್ತು ಸಾಹಿತ್ಯ ಮೀಮಾಂಸೆಯ ಪ್ರಾಧ್ಯಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ಡೀನ್, ಕುಲಸಚಿವ ಹಾಗೂ ಪ್ರಭಾರ ಕುಲಪತಿ ಸೇರಿದಂತೆ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಿದ್ದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಪ್ರೊ. ಕೆ.ವಿ. ನಾರಾಯಣ ಅವರು ಕನ್ನಡ ಭಾಷಾ ಚಿಂತನೆಗೆ ಆಧುನಿಕ ಹಾಗೂ ವೈಜ್ಞಾನಿಕ ಆಯಾಮವನ್ನು ನೀಡಿದ ಪ್ರಮುಖ ವಿದ್ವಾಂಸರಾಗಿದ್ದರು.
ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ಸೀಮಿತಗೊಳಿಸದೆ, ಜ್ಞಾನ ಮತ್ತು ಸಂಶೋಧನೆಯ ಭಾಷೆಯಾಗಿ ಬೆಳೆಸುವ ಉದ್ದೇಶ ಹೊಂದಿದ್ದರು. ಈ ನಿಟ್ಟಿನಲ್ಲಿ ಅವರು ರೂಪಿಸಿದ್ದ ‘ಕರ್ನಾಟಕ ಓದು’ ಕಾರ್ಯಾಗಾರ ಸರಣಿ ಸಂಶೋಧನಾ ವಲಯದಲ್ಲಿ ಗಮನ ಸೆಳೆದಿತ್ತು.
ಕನ್ನಡ ಸಾಹಿತ್ಯ ಮತ್ತು ಭಾಷಾವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿದ್ದರು.
ಪ್ರೊ. ಕೆ.ವಿ. ನಾರಾಯಣ ಅವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಭಾಷಾವಿಜ್ಞಾನ ಕ್ಷೇತ್ರದ ಹಿರಿಯ ವಿದ್ವಾಂಸರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಗೆ ನಾಡಿನ ಸಾಹಿತಿಗಳು, ಸಂಶೋಧಕರು ಹಾಗೂ ಅಪಾರ ಶಿಷ್ಯವೃಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



