7 ಜನರ ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಬಯಲು! ಶವಗಳ ಪ್ಯಾಕಿಂಗ್ ಗೆ ಸಾಮಗ್ರಿ ಖರೀದಿಸಿದ್ದ ಆರೋಪಿ
ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಹತ್ಯೆ ನಡೆಸಲು ಅಗತ್ಯವಿದ್ದ ವಸ್ತುಗಳನ್ನು ಆರೋಪಿ ಶೇಖರ್ ಮೊದಲೇ ಖರೀದಿಸಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಮೃತದೇಹಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ಸಾಮಗ್ರಿಗಳು, ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕಗಳು ಸೇರಿದಂತೆ ವಿವಿಧ ವಸ್ತುಗಳನ್ನು ಆರೋಪಿ ಸಂಗ್ರಹಿಸಿದ್ದ ಎನ್ನಲಾಗಿದೆ.
ಆರೋಪಿ ಶೇಖರ್ ಕೃತ್ಯಕ್ಕೆ ಅಗತ್ಯವಿದ್ದ ಬಹುತೇಕ ವಸ್ತುಗಳನ್ನು ತನ್ನ ಏರಿಯಾದ ಸುತ್ತಮುತ್ತಲಿನ ಅಂಗಡಿಗಳಿಂದಲೇ ಖರೀದಿಸಿದ್ದ. ಸ್ಥಳೀಯವಾಗಿ ಸಿಗದ ಕೆಲವು ವಸ್ತುಗಳನ್ನು ಸಂಗ್ರಹಿಸಲು ಯಶವಂತಪುರ ಹಾಗೂ ಆರ್ಎಂಸಿ ಯಾರ್ಡ್ನ ಅಂಗಡಿಗಳಿಗೆ ತೆರಳಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಯಾವೆಲ್ಲ ವಸ್ತುಗಳನ್ನು ಖರೀದಿಸಿದ್ದ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಂಬಂಧಪಟ್ಟ ಅಂಗಡಿಗಳಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿಗಳ ಮಾಲೀಕರು ಹಾಗೂ ಸಿಬ್ಬಂದಿಯ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.
ಇನ್ನು ಕೊಲೆ ನಡೆದ ಪ್ರದೇಶದ ಕೆಲವು ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಹೀಗಾಗಿ ಅವುಗಳನ್ನು ಸಂಗ್ರಹಿಸುವ ಪ್ರಯತ್ನ ಮುಂದುವರಿದಿದೆ. ಆರೋಪಿ ಕೃತ್ಯಕ್ಕೂ ಮುನ್ನ ನಡೆಸಿದ್ದ ಸಿದ್ಧತೆಗಳ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಮತ್ತೊಂದೆಡೆ, ಹತ್ಯೆಯಾದ ಏಳು ಮಂದಿಯ ಪೈಕಿ ಐವರ ಮೃತದೇಹಗಳು ಈಗಾಗಲೇ ಪತ್ತೆಯಾಗಿದ್ದು, ಉಳಿದ ಇಬ್ಬರಾದ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಏಳು ವರ್ಷದ ಬಾಲಕ ಪುನೀತ್ನ ಮೃತದೇಹ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಸುನೀತಾ ಹಾಗೂ ರೂಪವತಿ ಅವರ ಮೃತದೇಹಗಳು ಸೇಲಂನಲ್ಲಿ ಪತ್ತೆಯಾಗಿದ್ದರೆ, ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದವು.
ನಿನ್ನೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾದ ಶಿವಕುಮಾರ್ ಮತ್ತು ದಿವ್ಯಾ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ನಡೆಯಲಿದೆ. ಆರೋಪಿ ಶೇಖರ್ ನೀಡಿದ ಮಾಹಿತಿಯ ಆಧಾರದಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿದ್ದರು. ಮುಖ್ಯರಸ್ತೆಯಲ್ಲಿ ವಾಹನ ನಿಲ್ಲಿಸಿ, ಅಲ್ಲಿಂದ ಪಕ್ಕದ ಕಂದಕಕ್ಕೆ ಮೃತದೇಹಗಳನ್ನು ಎಸೆದಿದ್ದ ಎಂಬ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ ನಿನ್ನೆ ಆರೋಪಿ ಶೇಖರ್ ಹಾಗೂ ಮೃತರ ಸಂಬಂಧಿಕರ ಸಮ್ಮುಖದಲ್ಲಿ ಪೊಲೀಸರು ಮಹಜರು ನಡೆಸಿದ್ದರು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೂ ಪತ್ತೆಯಾಗದ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



