ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ: ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನೋಟಿಸ್ ಜಾರಿ ಮಾಡಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ತನಿಖಾಧಿಕಾರಿಗಳು, ಮೊಬೈಲ್ ಹಾಗೂ ಲ್ಯಾಪ್ಟಾಪ್ ಸಮೇತ ಬರುವಂತೆ ನಿರ್ದೇಶನ ನೀಡಿದ್ದಾರೆ.
ಪೂರ್ವನಿಗದಿತ ಪ್ರವಾಸದ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಿದ್ದ ಕೃಪಾ ಆಳ್ವಾ, ನವೆಂಬರ್ 7ರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದ್ದರು. ಕೃಪಾ ಆಳ್ವಾ ವಿರುದ್ಧ ಸಿಸಿಬಿ ಅಧಿಕಾರಿಗಳು ಈ ಹಿಂದೆಯೇ ಲುಕ್ಔಟ್ ಸರ್ಕ್ಯುಲರ್ (LOC) ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.
ಬಳಿಕ ಕೃಪಾ ಆಳ್ವಾ ಅವರನ್ನು ಸಿಸಿಬಿ ಸೈಬರ್ ವಿಭಾಗದ ಇನ್ಸ್ಪೆಕ್ಟರ್ ಸತೀಶ್ ಅವರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಕೃಪಾ ಆಳ್ವಾ ಮಧ್ಯಂತರ ಜಾಮೀನು ಪಡೆದಿದ್ದರಿಂದ ಅವರನ್ನು ಬಂಧಿಸಿರಲಿಲ್ಲ.
ಇದೀಗ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಅಧಿಕಾರಿಗಳು, ಕೃಪಾ ಆಳ್ವಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ತನಿಖೆಗೆ ಅಗತ್ಯವಿರುವ ಮೊಬೈಲ್ ಮತ್ತು ಲ್ಯಾಪ್ಟಾಪ್ಗಳನ್ನು ಸಹ ತಮ್ಮೊಂದಿಗೆ ತರುವಂತೆ ಸೂಚಿಸಿದ್ದಾರೆ.



