ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ಇಂದಿನಿಂದ 543 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ

Must read

ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ಇಂದಿನಿಂದ 543 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ದುಬಾರಿ ಔಷಧಿಗಳನ್ನು ಖರೀದಿಸುತ್ತಿರುವ ರೋಗಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಕಡಿತಗೊಳಿಸಲು ಆದೇಶ ಹೊರಡಿಸಿದೆ. ಇದರ ಅನ್ವಯ ಇಂದಿನಿಂದ (ನವೆಂಬರ್ 9) ದೇಶಾದ್ಯಂತ 137 ಜೀವರಕ್ಷಕ ಕ್ಯಾನ್ಸರ್ ಔಷಧಿಗಳು ಸೇರಿದಂತೆ ಒಟ್ಟು 543 ಕ್ಯಾನ್ಸರ್ ನಿರೋಧಕ ಔಷಧಿಗಳು ಹಾಗೂ ವಿವಿಧ ಬ್ರ್ಯಾಂಡ್ಗಳ ಬೆಲೆ ಇಳಿಕೆಯಾಗಲಿದೆ ಎಂದು ತಿಳಿಸಲಾಗಿದೆ. ಕೆಲವು ಔಷಧಿಗಳ ದರದಲ್ಲಿ ಶೇ.50ರಿಂದ ಗರಿಷ್ಠ ಶೇ.96.45ರವರೆಗೆ ಕಡಿತವಾಗಲಿದೆ ಎನ್ನಲಾಗಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಹಲವು ಪ್ರಮುಖ ಔಷಧಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಹೆಚ್ಚಿನ ಆರ್ಥಿಕ ಹೊರೆ ಎದುರಿಸುವಂತಾಗಿತ್ತು. ಔಷಧಿಗಳ ದುಬಾರಿ ದರದ ಬಗ್ಗೆ ಕಳವಳ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯೂ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.
ಇದರ ಜೊತೆಗೆ ಕ್ಯಾನ್ಸರ್ ಔಷಧಿಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ವಿಚಾರದ ಕುರಿತು ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಪರಿಷ್ಕರಿಸಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬರುವಂತೆ ಆದೇಶಿಸಿದೆ ಎಂದು ತಿಳಿಸಲಾಗಿದೆ.
ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಯಿಂದ ದೇಶಾದ್ಯಂತ ರೋಗಿಗಳಿಗೆ ವಾರ್ಷಿಕವಾಗಿ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ದುಬಾರಿ ಔಷಧಿಗಳ ದರ ಕಡಿಮೆಯಾಗುವುದರಿಂದ ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ಔಷಧ ವೆಚ್ಚದ ಹೊರೆ ತಗ್ಗುವ ನಿರೀಕ್ಷೆಯಿದೆ.
ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಇಮ್ಯುನೊಥೆರಪಿ ಔಷಧಿಗಳು ಸೇರಿದಂತೆ ಡೆನೋಸುಮ್ಯಾಬ್ (Denosumab), ಪೆಗ್ಫಿಲ್ಗ್ರಾಸ್ಟಿಮ್ (Pegfilgrastim) ಹಾಗೂ ಬೆವಾಸಿಝುಮಾಬ್ (Bevacizumab) ಮುಂತಾದ ಪ್ರಮುಖ ಔಷಧಿಗಳ ಬೆಲೆ ಕಡಿಮೆಯಾಗಲಿದೆ ಎಂದು ತಿಳಿಸಲಾಗಿದೆ. ಈ ಔಷಧಿಗಳ ವಿವಿಧ ಬ್ರ್ಯಾಂಡ್ಗಳಿಗೆ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ದರದ ಅನ್ವಯ ಬೆಲೆ ಇಳಿಕೆ ಅನ್ವಯವಾಗಲಿದೆ.
ಇನ್ನು, ಔಷಧಿಗಳ ಬೆಲೆ ಕಡಿತದ ಆದೇಶವನ್ನು ಆಸ್ಪತ್ರೆಗಳು, ಔಷಧ ಮಳಿಗೆಗಳು, ಚಿಲ್ಲರೆ ಹಾಗೂ ಸಗಟು ಮಾರಾಟಗಾರರು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ದರಕ್ಕೆ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ. ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಔಷಧಿಗಳನ್ನು ಖರೀದಿಸುವ ಗ್ರಾಹಕರು ಕೂಡ ಪರಿಷ್ಕೃತ ದರಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಕೇಂದ್ರ ಸರ್ಕಾರದ ‘ಫಾರ್ಮಾ ಸಹಿ ದಾಮ್’ (Pharma Sahi Daam) ಆ್ಯಪ್ ಮೂಲಕ ಔಷಧಿಗಳ ನಿಗದಿತ ಬೆಲೆಯನ್ನು ತಿಳಿದುಕೊಳ್ಳಲು ಅವಕಾಶವಿದೆ. ಅಲ್ಲದೆ, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿಯೂ ಔಷಧಿಗಳ ದರಪಟ್ಟಿ ಪರಿಶೀಲಿಸಬಹುದು.
ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಯ ನಿರ್ಧಾರದಿಂದ ದುಬಾರಿ ಚಿಕಿತ್ಸಾ ವೆಚ್ಚ ಎದುರಿಸುತ್ತಿರುವ ರೋಗಿಗಳಿಗೆ ಆರ್ಥಿಕ ನೆರವು ದೊರೆಯುವ ನಿರೀಕ್ಷೆಯಿದೆ. ಇಂದಿನಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿದ್ದು, ರೋಗಿಗಳು ನಿಗದಿತ ಬೆಲೆಗೆ ಔಷಧಿಗಳನ್ನು ಖರೀದಿಸಬಹುದಾಗಿದೆ ಎಂದು ತಿಳಿಸಲಾಗಿದೆ.

- Advertisement -spot_img

More articles

- Advertisement -spot_img

Latest article