ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಷಣ: ಡಾ. ರಾಜ್ಕುಮಾರ್, ಹೆಚ್.ವಿ. ಶೇಷಾದ್ರಿ ಸ್ಮರಣೆ

Must read

ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಷಣ: ಡಾ. ರಾಜ್ಕುಮಾರ್, ಹೆಚ್.ವಿ. ಶೇಷಾದ್ರಿ ಸ್ಮರಣೆ

ಬೆಂಗಳೂರು: ಕರ್ನಾಟಕ ಹಲವು ದಶಕಗಳಿಂದ ಯೋಗದ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಅನೇಕರು ಯೋಗ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನ ಪ್ರಶಾಂತಿ ಕುಟೀರದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚಿಂತಕ, ಸಂಘಟಕ ಹೆಚ್.ವಿ. ಶೇಷಾದ್ರಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದ ಮಹತ್ವವನ್ನು ವಿವರಿಸುವ ವೇಳೆ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರನ್ನೂ ಸ್ಮರಿಸಿದ್ದಾರೆ.
ಹೆಚ್.ವಿ. ಶೇಷಾದ್ರಿ ಅವರು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು. ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಅನೇಕರಿಗೆ ಮಾರ್ಗದರ್ಶನ ನೀಡಿದ್ದರು ಎಂದು ಮೋದಿ ಸ್ಮರಿಸಿದ್ದಾರೆ. ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಯೋಗಕ್ಕೆ ಕೊಡುಗೆ ನೀಡಿದ ಅನೇಕ ಮಹನೀಯರು ನಮ್ಮಲ್ಲಿದ್ದಾರೆ. ಈ ಸಂದರ್ಭದಲ್ಲಿ ಡಾ. ರಾಜ್ಕುಮಾರ್ ಅವರನ್ನೂ ಉದಾಹರಣೆಯಾಗಿ ಪ್ರಧಾನಿ ಉಲ್ಲೇಖಿಸಿದ್ದಾರೆ.
ಪ್ರಶಾಂತಿ ಕುಟೀರದ 50 ವರ್ಷಗಳ ಪಯಣ ಸೇವೆ ಮತ್ತು ಸಮರ್ಪಣೆಯ ಕಥೆಯಾಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಸಾಧನೆಯ ಬಗ್ಗೆ ತಿಳಿದುಕೊಳ್ಳಬೇಕು. ಒಂದು ಸರಳ ಯೋಗ ಕೇಂದ್ರ ಇಷ್ಟು ದೊಡ್ಡ ಆಂದೋಲನವಾಗಿ ಬೆಳೆದಿರುವುದು ನಿಜಕ್ಕೂ ಸ್ಫೂರ್ತಿದಾಯಕ ಸಂಗತಿ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಹೆಚ್.ವಿ. ಶೇಷಾದ್ರಿ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡ ಮೋದಿ, ಅವರ ಸರಳ ಸ್ವಭಾವವನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ದೊಡ್ಡ ವ್ಯಕ್ತಿತ್ವ ಹಾಗೂ ಅಪಾರ ಅನುಭವ ಹೊಂದಿದ್ದರೂ ಅವರ ನಡೆನುಡಿಯಲ್ಲಿ ಅಪಾರ ವಿನಯವಿತ್ತು. ತಾವು ಹಿಂದೆಯೇ ಉಳಿದು ಇತರರನ್ನು ಮುಂದೆ ತರುವುದು, ಜನರನ್ನು ಒಗ್ಗೂಡಿಸಿ ದೇಶಕ್ಕಾಗಿ ಅವರನ್ನು ಸಿದ್ಧಪಡಿಸುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು. ಇದೇ ಅವರ ಜೀವನದ ಪ್ರಮುಖ ಧ್ಯೇಯವಾಗಿತ್ತು ಎಂದು ಹೇಳಿದ್ದಾರೆ.
ಮಗುವಿನ ಆರೈಕೆಗಾಗಿ ತಾಯಿ ಇಡೀ ರಾತ್ರಿ ನಿದ್ರಿಸದೆ ಮಗುವಿನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ಯಾವುದೇ ಸ್ವಾರ್ಥವಿಲ್ಲದೆ ದುಡಿಯುತ್ತಾಳೆ. ಇದೇ ಭಾವನೆಯನ್ನು ಸಮಾಜದ ಕಡೆಗೂ ವಿಸ್ತರಿಸಿದರೆ ಸಮಾಜಕ್ಕೆ ಅಪಾರ ಒಳಿತಾಗುತ್ತದೆ ಎಂದು ಶೇಷಾದ್ರಿ ಅವರು ಆಗಾಗ್ಗೆ ಉದಾಹರಣೆ ನೀಡುತ್ತಿದ್ದರು ಎಂದು ಮೋದಿ ತಿಳಿಸಿದ್ದಾರೆ.
ಹೆಚ್.ವಿ. ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನವನ್ನು ಹಲವು ವರ್ಷಗಳ ಕಾಲ ತಾವು ಪಡೆದಿದ್ದಾಗಿ ಹೇಳಿದ ಪ್ರಧಾನಿ, ಅವರೊಂದಿಗೆ ಕಳೆದ ಕ್ಷಣಗಳು ಹಾಗೂ ಅವರು ಹೇಳುತ್ತಿದ್ದ ಮಾತುಗಳು ಇಂದಿಗೂ ತಮ್ಮ ಪಾಲಿಗೆ ಅಮೂಲ್ಯ ನೆನಪುಗಳಾಗಿವೆ ಎಂದಿದ್ದಾರೆ.
“ನಾವು ಸಮಾಜಕ್ಕೆ ಎರಡೂ ಕೈಗಳಿಂದ ಕೊಟ್ಟರೆ, ಸಮಾಜ ಲಕ್ಷಾಂತರ ಕೈಗಳಿಂದ ನಮಗೆ ಮರಳಿ ನೀಡುತ್ತದೆ” ಎಂಬ ಶೇಷಾದ್ರಿ ಅವರ ಮಾತುಗಳನ್ನು ಸ್ಮರಿಸಿದ ಮೋದಿ, ತಮ್ಮ ಜೀವನದಲ್ಲಿ ಈ ಮಾತು ಹಲವು ಬಾರಿ ನಿಜವಾಗಿರುವುದನ್ನು ಕಂಡಿದ್ದೇನೆ. ಜನರ ಸೇವೆ ಮಾಡುವಾಗಲೆಲ್ಲ ಅವರ ಆಶೀರ್ವಾದ ದೊರೆತಿದೆ. ಅದುವೇ ತಮ್ಮ ಜೀವನದ ಅತ್ಯಂತ ದೊಡ್ಡ ಆಸ್ತಿಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಕಳೆದ 12 ವರ್ಷಗಳಲ್ಲಿ ಭಾರತ ತನ್ನ ಸಂಸ್ಕೃತಿ, ಜ್ಞಾನ ಮತ್ತು ವಿಜ್ಞಾನವನ್ನು ಪೂರ್ಣ ವಿಶ್ವಾಸದೊಂದಿಗೆ ಜಗತ್ತಿನ ಮುಂದೆ ಪ್ರಸ್ತುತಪಡಿಸುತ್ತಿದೆ. ಇದರ ಫಲವಾಗಿ ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ಅಮೆರಿಕದಿಂದ ಆಸ್ಟ್ರೇಲಿಯಾದವರೆಗೆ ವಿವಿಧ ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ವಿದೇಶಿಗರಿಗೆ ಭಾರತವನ್ನು ಅರಿತುಕೊಳ್ಳಲು ಯೋಗ ಒಂದು ಪ್ರಮುಖ ಬಾಗಿಲಾಗಿದೆ. ತಾವು ವಿಶ್ವದ ಯಾವುದೇ ದೇಶಕ್ಕೆ ಭೇಟಿ ನೀಡಿದರೂ ಅಲ್ಲಿನ ನಾಯಕರು ಯೋಗದ ಬಗ್ಗೆ ಚರ್ಚಿಸುತ್ತಾರೆ. ಹಲವು ದೊಡ್ಡ ರಾಷ್ಟ್ರಗಳ ಅಧ್ಯಕ್ಷರ ಕುಟುಂಬದವರೂ ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತೀಯರ ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article