ಸೋನಿಯಾ ಗಾಂಧಿಗೆ ಸಾವರ್ಕರ್ ಮೊಮ್ಮಗನ ಲೀಗಲ್ ನೋಟಿಸ್.. ಪುಸ್ತಕದ ಹೇಳಿಕೆಗಳ ವಿರುದ್ಧ ಆಕ್ಷೇಪ!
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಅಶೋಕ್ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಸೋನಿಯಾ ಗಾಂಧಿ ಬರೆದಿರುವ ‘Belonging: A Journey of Love’ ಪುಸ್ತಕದಲ್ಲಿ ಸಾವರ್ಕರ್ ಕುರಿತು ಮಾಡಿರುವ ಉಲ್ಲೇಖಗಳಿಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿರುವ ಹೇಳಿಕೆಗಳು ಆಧಾರರಹಿತವಾಗಿದ್ದು, ಇತಿಹಾಸವನ್ನು ತಪ್ಪಾಗಿ ಬಿಂಬಿಸುತ್ತವೆ ಎಂದು ಸತ್ಯಕಿ ಆರೋಪಿಸಿದ್ದಾರೆ. ಈ ಉಲ್ಲೇಖಗಳಿಂದ ಸಾವರ್ಕರ್ ಅವರ ಗೌರವ ಮತ್ತು ಪರಂಪರೆಗೆ ಧಕ್ಕೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪುಸ್ತಕದ ಉಲ್ಲೇಖಗಳಿಗೆ ಆಕ್ಷೇಪ
ಸತ್ಯಕಿ ಅವರು ತಮ್ಮ ವಕೀಲ ಸಂಗ್ರಾಮ್ ಕೊಲ್ಹತ್ಕರ್ ಅವರ ಮೂಲಕ ಸೋನಿಯಾ ಗಾಂಧಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಪುಸ್ತಕದ 201ನೇ ಪುಟದಲ್ಲಿರುವ ಉಲ್ಲೇಖವನ್ನು ವಿಶೇಷವಾಗಿ ಪ್ರಶ್ನಿಸಿರುವ ಅವರು, ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳೊಂದಿಗೆ ಸಹಕರಿಸಿದ ವ್ಯಕ್ತಿಗಳ ಕುರಿತು ಪ್ರಸ್ತಾಪಿಸುವ ಸಂದರ್ಭದಲ್ಲಿ ಸಾವರ್ಕರ್ ಅವರ ಹೆಸರನ್ನೂ ಉಲ್ಲೇಖಿಸಿರುವುದಕ್ಕೆ ಆಕ್ಷೇಪಿಸಿದ್ದಾರೆ.
ಈ ಹೇಳಿಕೆಯ ನಿರೂಪಣೆಯು ಸಾವರ್ಕರ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಅಥವಾ ಅವರೊಂದಿಗೆ ಸಹಕರಿಸಿದ್ದರು ಎಂಬ ಭಾವನೆ ಮೂಡಿಸುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಐತಿಹಾಸಿಕ ಸಂದರ್ಭವನ್ನು ಪರಿಗಣಿಸಿಲ್ಲ ಎಂಬ ಆರೋಪ
ಸಾವರ್ಕರ್ ಅವರ ಸೆರೆವಾಸ, ಅವರು ಸಲ್ಲಿಸಿದ್ದ ಅರ್ಜಿಗಳು ಮತ್ತು ರಾಜಕೀಯ ಚಟುವಟಿಕೆಗಳ ಐತಿಹಾಸಿಕ ಹಿನ್ನೆಲೆಯನ್ನು ಪರಿಶೀಲಿಸಿದಾಗ ಇಂತಹ ಆರೋಪಗಳಿಗೆ ಆಧಾರವಿಲ್ಲ ಎಂದು ಸತ್ಯಕಿ ಆಕ್ಷೇಪಿಸಿದ್ದಾರೆ. ಪುಸ್ತಕದಲ್ಲಿನ ಹೇಳಿಕೆಗಳು ಐತಿಹಾಸಿಕ ಸಂದರ್ಭವನ್ನು ಸರಿಯಾಗಿ ಪ್ರತಿಬಿಂಬಿಸುತ್ತಿಲ್ಲ ಎಂಬುದು ಅವರ ವಾದವಾಗಿದೆ.
ಸಾವರ್ಕರ್ ಕುಟುಂಬದ ಸದಸ್ಯನಾಗಿ ಪುಸ್ತಕದಲ್ಲಿನ ಉಲ್ಲೇಖಗಳು ತಮಗೆ ತೀವ್ರ ನೋವು ಮತ್ತು ಅಸಮಾಧಾನ ಉಂಟುಮಾಡಿವೆ ಎಂದು ಸತ್ಯಕಿ ಪರ ವಕೀಲರು ನೋಟಿಸ್ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ವಿವಾದಿತ ಹೇಳಿಕೆಗಳಿಗೆ ಸೋನಿಯಾ ಗಾಂಧಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.



