ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳು ನೀಡಿದ ವೈದ್ಯಕೀಯ ವರದಿಯಲ್ಲಿ ಏನಿದೆ?

Must read

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳು ನೀಡಿದ ವೈದ್ಯಕೀಯ ವರದಿಯಲ್ಲಿ ಏನಿದೆ?

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಆರೋಗ್ಯದ ಕುರಿತು ಜೈಲಾಧಿಕಾರಿಗಳು ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ದರ್ಶನ್ ಅವರಿಗೆ ಸೊಂಟದ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆ ಇದ್ದು, ಕೆಳಬೆನ್ನು ನೋವು ಹಾಗೂ ಸ್ನಾಯು ಸೆಳೆತ ಕಾಣಿಸಿಕೊಂಡಿದೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋರ್ಟ್ ಆದೇಶದಂತೆ ಜೈಲಿನಲ್ಲಿಯೇ ಅವರಿಗೆ ಹಂತ ಹಂತವಾಗಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.

2025ರ ಆಗಸ್ಟ್ 14ರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸುವಂತೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ವೈದ್ಯಕೀಯ ತಂಡ ಜೈಲಿಗೆ ಭೇಟಿ ನೀಡಿದೆ. ಬೆಂಗಳೂರಿನ ಸರ್ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯ ಫಿಸಿಯೋಥೆರಪಿ ತಂಡ ನವೆಂಬರ್ 4ರಂದು ಜೈಲಿಗೆ ತೆರಳಿ ದರ್ಶನ್ ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿ ಚಿಕಿತ್ಸೆ ನೀಡಿದೆ.

ನವೆಂಬರ್ 7ರಂದು ಎರಡನೇ ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿದೆ. ಬಳಿಕ ನವೆಂಬರ್ 20ರಂದು ಮೂರನೇ ಬಾರಿಗೆ ವೈದ್ಯಕೀಯ ತಂಡ ಜೈಲಿಗೆ ಭೇಟಿ ನೀಡಿ ಚಿಕಿತ್ಸೆ ನೀಡಿದೆ. ಈ ವೇಳೆ ಅಲ್ಟ್ರಾಸೌಂಡ್ ಮತ್ತು ವೈಬ್ರೇಟರ್ ವಿಧಾನಗಳನ್ನು ಬಳಸಿಕೊಂಡು ಫಿಸಿಯೋಥೆರಪಿ ಮಾಡಲಾಗಿದೆ. ನವೆಂಬರ್ 25ರಂದು ನಾಲ್ಕನೇ ಹಂತದ ಫಿಸಿಯೋಥೆರಪಿ ಚಿಕಿತ್ಸೆಯನ್ನೂ ನೀಡಲಾಗಿದೆ.

ವೈದ್ಯರು ದರ್ಶನ್ ಅವರಿಗೆ ಔಷಧಗಳ ಸೇವನೆ, ಸಾಕಷ್ಟು ವಿಶ್ರಾಂತಿ ಹಾಗೂ ಪೌಷ್ಟಿಕ ಆಹಾರ ಸೇವಿಸುವಂತೆ ಸಲಹೆ ನೀಡಿದ್ದಾರೆ. ಆಹಾರದಲ್ಲಿ ಮೊಟ್ಟೆ, ಹಾಲು ಸೇರಿದಂತೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಅಂಶವಿರುವ ಆಹಾರಗಳನ್ನು ಸೇರಿಸಿಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ. ವೈದ್ಯಕೀಯ ವರದಿಯ ಪ್ರಕಾರ, ಸದ್ಯ ದರ್ಶನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಆದರೆ, ಬೆನ್ನುನೋವು ಮುಂದುವರಿದ ಹಿನ್ನೆಲೆಯಲ್ಲಿ ದರ್ಶನ್ ಅವರು ಜೈಲಿನ ಹೊರಗೆ ಸೂಕ್ತ ಚಿಕಿತ್ಸೆ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನವೆಂಬರ್ 27ರಂದು ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು ನೋವು ನಿವಾರಣೆಗೆ ಅಗತ್ಯ ಚಿಕಿತ್ಸೆ ನೀಡಬೇಕು ಹಾಗೂ ಅವಶ್ಯಕತೆ ಕಂಡುಬಂದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜೈಲಾಧಿಕಾರಿಗಳಿಗೆ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ.

- Advertisement -spot_img

More articles

- Advertisement -spot_img

Latest article