ನಂದಿನಿ ಮೊಸರು ಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ಮೊಸರಿನ ಬೆಲೆ ಇಳಿಕೆ, ಹೊಸ ದರ ಎಷ್ಟು ಗೊತ್ತಾ?
ಬೆಂಗಳೂರು: ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಿಹಿಸುದ್ದಿ ನೀಡಿದೆ. ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಕಡಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಎಂಎಫ್ಗೆ ಸೂಚನೆ ನೀಡಿದ್ದರು. ಇದೀಗ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕೆಎಂಎಫ್ ಮೊಸರಿನ ಬೆಲೆಯನ್ನು ಇಳಿಕೆ ಮಾಡಿದೆ.
ಪರಿಷ್ಕೃತ ದರದ ಪ್ರಕಾರ, ಈ ಹಿಂದೆ 34 ರೂಪಾಯಿ ಇದ್ದ ಅರ್ಧ ಲೀಟರ್ ನಂದಿನಿ ಮೊಸರಿನ ಪ್ಯಾಕ್ ಬೆಲೆಯನ್ನು 33 ರೂಪಾಯಿಗೆ ಇಳಿಸಲಾಗಿದೆ. ಅದೇ ರೀತಿ 68 ರೂಪಾಯಿ ಇದ್ದ ಒಂದು ಲೀಟರ್ ಪ್ಯಾಕ್ ಬೆಲೆಯನ್ನು 66 ರೂಪಾಯಿಗೆ ಕಡಿತಗೊಳಿಸಲಾಗಿದೆ.
ಕಳೆದ ನವೆಂಬರ್ 1ರಿಂದ ಜಾರಿಗೆ ಬರುವಂತೆ ಒಂದು ಲೀಟರ್ ಮೊಸರಿನ ಬೆಲೆಯನ್ನು 54 ರೂಪಾಯಿಯಿಂದ 68 ರೂಪಾಯಿಗೆ ಹಾಗೂ ಅರ್ಧ ಲೀಟರ್ ಪ್ಯಾಕ್ ಬೆಲೆಯನ್ನು 28 ರೂಪಾಯಿಯಿಂದ 34 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದೀಗ ಗ್ರಾಹಕರಿಗೆ ಅನುಕೂಲವಾಗುವಂತೆ ಕೆಎಂಎಫ್ ದರ ಕಡಿತದ ನಿರ್ಧಾರ ಕೈಗೊಂಡಿದೆ.



