ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನುಕುಮಾರ್ ಮತ್ತು ಸಚಿನ್ ಬಂಧಿತ ಆರೋಪಿಗಳಾಗಿದ್ದು, ಇವರು ಹಗಲಿನಲ್ಲಿ ತಳ್ಳುವ ಗಾಡಿಗಳಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ಆರೋಪಿಗಳು ರಾತ್ರಿಯಾದರೆ ದ್ವಿಚಕ್ರ ವಾಹನಗಳ ಹ್ಯಾಂಡ್‌ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.
ಇಬ್ಬರು ಸಹೋದರಿಯರನ್ನೇ ವಿವಾಹವಾಗಿದ್ದ ಮನುಕುಮಾರ್ ಮತ್ತು ಸಚಿನ್ ಕೃತ್ಯದ ಕುರಿತು ಪತ್ನಿಯರಿಗೂ ಅರಿವಿತ್ತು. ಐಷಾರಾಮಿ ಜೀವನಕ್ಕಾಗಿ ಪತಿಯರ ಕೃತ್ಯಕ್ಕೆ ಪತ್ನಿಯರೂ ಬೆಂಬಲ ನೀಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಆರೋಪಿಗಳಿಂದ 37.50 ಲಕ್ಷ ರೂ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ನಗರದ ರಾಮಮೂರ್ತಿನಗರ, ಮಹದೇವಪುರ, ಹೆಚ್‌ಎಎಲ್, ವೈಟ್‌ಫೀಲ್ಡ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






