ಭೀಕರ ರಸ್ತೆ ಅಪಘಾತ: ಕ್ರೂಸರ್-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಮೂವರು ಕೃಷಿ ಕಾರ್ಮಿಕರು ಸಾವು
ಗದಗ: ಜಿಲ್ಲೆಯ ರೋಣ ತಾಲೂಕಿನ ಜಿಗಳೂರು ಗ್ರಾಮದ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಕೃಷಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಇನ್ನೂ 12 ಮಂದಿ ಗಾಯಗೊಂಡಿದ್ದಾರೆ.
ಗಜೇಂದ್ರಗಡದಿಂದ ರೋಣದತ್ತ ತೆರಳುತ್ತಿದ್ದ ಕ್ರೂಸರ್ ವಾಹನ ಹಾಗೂ ರೋಣದಿಂದ ಗಜೇಂದ್ರಗಡದತ್ತ ಸಾಗುತ್ತಿದ್ದ ಕ್ಯಾಂಟರ್ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮರಿಯಂಬು ಹುನಗುಂದ (55), ಅನ್ನಪೂರ್ಣ ಚಂಗಳಿ (45) ಹಾಗೂ ಸುಜಾತಾ ಹೊಸಮನಿ (30) ಎಂದು ಗುರುತಿಸಲಾಗಿದೆ. ಕಡಲೆ ಕೀಳುವ ಕೆಲಸಕ್ಕಾಗಿ ತೆರಳುತ್ತಿದ್ದ ಕೃಷಿ ಕಾರ್ಮಿಕರೇ ಈ ದುರ್ಘಟನೆಯಲ್ಲಿ ಬಲಿಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕ್ಯಾಂಟರ್ ಚಾಲಕ ಅಪಘಾತದ ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ರೋಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






