ಹೊಸಕೋಟೆ ಸಮೀಪ ಭೀಕರ ಸರಣಿ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು.!
ಹೊಸಕೋಟೆ: ಬೈಕ್, ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್ಪೇಟೆ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಹೊಸಕೋಟೆ ತಾಲೂಕಿನ ಎಂ. ಸತ್ಯವಾರ ಸಮೀಪ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಮೃತರಾಗಿದ್ದಾರೆ. ಮೃತರು ಬೆಂಗಳೂರಿನ ನಿವಾಸಿಗಳು ಎಂದು ತಿಳಿದು ಬಂದಿದೆ. ಕ್ಯಾಂಟರ್ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಿಯಂತ್ರಣ ಕಳೆದುಕೊಂಡ ಎಕ್ಸ್ಯುವಿ ಕಾರು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದೇ ಕಾರು ಕ್ಯಾಂಟರ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ಮತ್ತೊಂದು ಕಾರಿಗೂ ಹಾನಿಯಾಗಿದೆ. ಅಪಘಾತದ ತೀವ್ರತೆಯಿಂದ ಲಾರಿ ಪಲ್ಟಿಯಾಗಿದ್ದು, ಕಾರು ಸೇರಿದಂತೆ ವಾಹನಗಳು ನಜ್ಜುಗುಜ್ಜಾಗಿವೆ. ಕ್ಯಾಂಟರ್‌ನ ಎಕ್ಸೆಲ್ ಕಟ್ ಆಗಿ ಚಕ್ರಗಳು ಬೇರ್ಪಟ್ಟಿವೆ. ವಾಹನಗಳ ಬಿಡಿಭಾಗಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಘಟನಾ ಸ್ಥಳಕ್ಕೆ ಐಜಿ ಲಾಭೂರಾವ್, ಎಸ್ಪಿ ಚಂದ್ರಕಾರ್, ಡಿವೈಎಸ್ಪಿ ಮಲ್ಲೇಶ್ ಹಾಗೂ ಸೂಲಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.






