No menu items!
3.1 C
Munich
Thursday, April 30, 2026

ಬೆಂಗಳೂರು ತಾಪಮಾನ 39 ಡಿಗ್ರಿಗೆ ಏರಿಕೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Must read

ಬೆಂಗಳೂರು ತಾಪಮಾನ 39 ಡಿಗ್ರಿಗೆ ಏರಿಕೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣ ಆವರಿಸಿದ್ದು, ನಿನ್ನೆಯಷ್ಟೇ ಮೋಡ ಕವಿದ ವಾತಾವರಣ ಕಾಣಿಸಿತ್ತು. ಆದರೆ ಇಂದು ರಾಜ್ಯದಾದ್ಯಂತ ಒಣಹವೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ ಎಂಬ ಮಾಹಿತಿ ನೀಡಲಾಗಿದೆ.

ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಬಿಸಿಲಿನ ತಾಪಕ್ಕೆ ಬಳಲುತ್ತಿದೆ. ಕಳೆದ ಒಂದು ವಾರದಿಂದ ತಾಪಮಾನ ನಿರಂತರ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38ರಿಂದ 39 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಈಗಾಗಲೇ ಮಧ್ಯಾಹ್ನ ವೇಳೆಯಲ್ಲಿ ಹೊರಗೆ ಸಂಚಾರ ಮಾಡುವುದು ಕಷ್ಟಕರವಾಗಿದೆ. ಜನರು ಏರ್ ಕೂಲರ್ ಹಾಗೂ ಫ್ಯಾನ್‌ಗಳ ನೆರವಿಗೆ ಮೊರೆ ಹೋಗಿದ್ದಾರೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ, ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಈ ಹಿನ್ನೆಲೆ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು ಎಂದು ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಲಾಗಿದೆ.

ವೈದ್ಯರು ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡು ಭಾಗದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣ ಮುಂದುವರಿದಿದ್ದು, ಇಂದೂ ಇದೇ ಪರಿಸ್ಥಿತಿ ಇರಲಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿಯೂ ಒಣಹವೆಯ ವಾತಾವರಣ ಮುಂದುವರಿಯಲಿದೆ.

- Advertisement -spot_img

More articles

- Advertisement -spot_img

Latest article