ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್
ಬೆಂಗಳೂರು: ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಕುಮಾರಪಾರ್ಕ್ ಸರಕಾರಿ ನಿವಾಸ ಹಾಗೂ ಸುತ್ತೂರು ಸದನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಕೇಳಿದಾಗ, “ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಸಿಎಂ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.
ಹೈಕಮಾಂಡ್ ನಿಮ್ಮನ್ನು ಹಾಗೂ ಸಿಎಂ ಅವರನ್ನು ಕರೆದಿದ್ದಾರಾ ಎಂದು ಕೇಳಿದಾಗ, “ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ” ಎಂದು ತಿಳಿಸಿದರು.






