ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ
ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ ಪ್ರದೇಶದಲ್ಲಿರುವ ಹಾರ್ಡ್‌ವೇರ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 175 ಅಂಗಡಿ ಮಳಿಗೆಗಳಿದ್ದು, ಕೆಳಮಹಡಿಯ ಹಾರ್ಡ್‌ವೇರ್ ಅಂಗಡಿಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಮೇಲಿನ ಮಹಡಿಗಳಿಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಕಟ್ಟಡದಲ್ಲಿ ಪ್ಲಾಸ್ಟಿಕ್, ಫ್ಯಾನ್ಸಿ ವಸ್ತುಗಳು, ಬಟ್ಟೆಗಳು ಸೇರಿದಂತೆ ಸುಡುವ ಸ್ವಭಾವದ ಸಾಮಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿದ್ದರಿಂದ ಬೆಂಕಿ ವೇಗವಾಗಿ ಹರಡಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ದಟ್ಟ ಹೊಗೆ ಆವರಿಸಿದ್ದರಿಂದ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮೂಡಿದೆ. ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಆದರೆ, ಕುಂಬಾರಪೇಟೆ ಪ್ರದೇಶದ ಕಿರಿದಾದ ರಸ್ತೆಗಳ ಕಾರಣದಿಂದ ಅಗ್ನಿಶಾಮಕ ವಾಹನಗಳಿಗೆ ಸ್ಥಳಕ್ಕೆ ತಲುಪಲು ಅಡಚಣೆ ಉಂಟಾಗಿದೆ.
ಅಗ್ನಿ ಅವಘಡದ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.






