ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್ಐಆರ್
ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅಲಿಯಾಸ್ ಡಾಗ್ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಬಿಎನ್ಎಸ್ ಸೆಕ್ಷನ್ 351 ಮತ್ತು 352ರ ಅಡಿಯಲ್ಲಿ ರಜತ್ ಹಾಗೂ ಧನರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರುದಾರ ಸತೀಶ್ ಅವರ ಪ್ರಕಾರ, ಕಳೆದ ವರ್ಷ ಡಿಸೆಂಬರ್ 12ರಂದು ರಜತ್ ಕರೆ ಮಾಡಿ, ನಾನು ಮತ್ತು ನನ್ನ ಸ್ನೇಹಿತ ಧನರಾಜ್ ಸೇರಿ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ. ಅದರ ಆರಂಭದಲ್ಲಿ ನಿಮ್ಮ ಸಂದರ್ಶನವನ್ನು ಪ್ರಕಟಿಸುತ್ತೇವೆ ಎಂದು ಹೇಳಿ ಮಾತನಾಡಿಸಿದ್ದರು. ನಂತರ ಸಂದರ್ಶನವನ್ನು ಚಿತ್ರೀಕರಿಸಿದ ಬಳಿಕ ಅಪ್ಲೋಡ್ ಮಾಡುವಾಗ ತಮ್ಮ ಮಾತುಗಳನ್ನು ತಿರುಚಿ ಪ್ರಕಟಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂದರ್ಶನವನ್ನು ಎರಡು ಕ್ಯಾಮೆರಾ ಮತ್ತು ಎರಡು ಮೊಬೈಲ್ಗಳ ಮೂಲಕ ನಾಲ್ವರು ಸೇರಿ ಚಿತ್ರೀಕರಿಸಿದ್ದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಫೆಬ್ರವರಿ 27ರಂದು ರಾತ್ರಿ 10:30ರ ಸುಮಾರಿಗೆ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಹಾಕಿದ ವಿಚಾರಕ್ಕೆ ರಜತ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಧ್ಯರಾತ್ರಿ ಅವರ ಫೋನ್ನಿಂದ ನಿರಂತರವಾಗಿ ಬೆದರಿಕೆ ಕರೆಗಳು ಬಂದಿವೆ ಎಂದು ಸತೀಶ್ ಆರೋಪಿಸಿದ್ದಾರೆ.
ರಜತ್ ಮತ್ತು ಧನರಾಜ್ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಿದ್ದು, ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಪೊಲೀಸರಿಗೆ ಮನವಿ ಮಾಡಿದ್ದಾರೆ.






