No menu items!
8 C
Munich
Saturday, May 2, 2026

ಆನೇಕಲ್ ಕಿಡ್ನ್ಯಾಪ್–ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ

Must read

ಆನೇಕಲ್ ಕಿಡ್ನ್ಯಾಪ್–ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ

ಬೆಂಗಳೂರು: ಆನೇಕಲ್‌ನಲ್ಲಿ ಕಿಡ್ನ್ಯಾಪ್ ಆಗಿ ಬಳಿಕ ತಮಿಳುನಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಓರ್ವ ಅಪ್ರಾಪ್ತ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್, ಪ್ರಶಾಂತ್ ಹಾಗೂ ಒಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದೆ. ಆರೋಪಿಗಳು ಕಿಡ್ನ್ಯಾಪ್ ಮಾಡಲು ಬಳಸಿದ್ದ ಹುಂಡೈ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮೃತ ಗೋಪಾಲ್ ಅಲಿಯಾಸ್ ಗೋಪಿ ಅವರು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೊನ್ನಕಳಶಾಪುರ ನಿವಾಸಿಯಾಗಿದ್ದರು. ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಅತ್ತಿಬೆಲೆ–ಆನೇಕಲ್ ಮಾರ್ಗ ಮಧ್ಯೆ ಕರ್ಪೂರು ಬಳಿ ಘಟನೆ ನಡೆದಿದೆ. ಈ ವೇಳೆ ಗೂಡ್ಸ್ ವಾಹನವು ಗೋಪಾಲ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು.

ಕಾರು ನಿಲ್ಲಿಸಿ ಕೆಳಗಿಳಿದಾಗ ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಗೋಪಾಲ್ ಹಾಗೂ ಅವರ ಸ್ನೇಹಿತ ಸತೀಶ್ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಗೋಪಾಲ್ ಅವರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಪರಾರಿಯಾಗಿದ್ದರು. ನಂತರ ಸತೀಶ್ ಅವರು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸೋಮವಾರ ಬೆಳಗ್ಗೆ ತಮಿಳುನಾಡಿನ ಡೆಂಕಣೀಕೋಟೆ ಸಮೀಪ ಗೋಪಾಲ್ ಅವರ ಶವ ಪತ್ತೆಯಾಗಿತ್ತು. ಈ ಸುದ್ದಿ ತಿಳಿದ ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕ್ರೋಶಗೊಂಡು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಆರೋಪಿ ಮೋಹನ್ ಬಾಬು ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಪೊಲೀಸ್ ತನಿಖೆಯಲ್ಲಿ, ಗೋಪಾಲ್ ಮತ್ತು ಆರೋಪಿ ಮೋಹನ್ ಬಾಬು ಹಿಂದೆ ಒಟ್ಟಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಆದರೆ ಸುಮಾರು ಹತ್ತು ವರ್ಷಗಳ ಹಿಂದೆ ಗೋಪಾಲ್ ಸ್ವಾತಿ ಎಂಬ ಯುವತಿಯನ್ನು ವಿವಾಹವಾದ ಬಳಿಕ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಸ್ವಾತಿಯನ್ನು ಮದುವೆಯಾಗುವ ಆಸೆ ಹೊಂದಿದ್ದ ಮೋಹನ್ ಬಾಬುಗೆ ಇದರಿಂದ ದ್ವೇಷ ಉಂಟಾಗಿತ್ತು ಎಂದು ತಿಳಿದುಬಂದಿದೆ.

ಇದೇ ದ್ವೇಷದ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಗೋಪಾಲ್ ಅವರನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಬಿಡಲಾಗಿತ್ತು ಎನ್ನಲಾಗಿದೆ. ಬಳಿಕವೂ ಪದೇಪದೇ ಕೊಲೆ ಬೆದರಿಕೆ ಹಾಕುತ್ತಿದ್ದ ಮೋಹನ್ ಬಾಬು, ಕಳೆದ ಭಾನುವಾರ 25 ಲಕ್ಷ ರೂಪಾಯಿ ಸುಪಾರಿ ನೀಡಿ ಗೋಪಾಲ್ ಅವರನ್ನು ಕಿಡ್ನ್ಯಾಪ್ ಮಾಡಿಸಿ ಕೊಲೆ ಮಾಡಿಸಿದ್ದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article