ಟಿಪ್ಪರ್ ಲಾರಿ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಸಾವು!
ಬೆಂಗಳೂರು: ಟಿಪ್ಪರ್ ಲಾರಿ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿದ ದುರ್ಘಟನೆ ಬುಧವಾರ ಸಂಜೆ ಮೈಸೂರು ರಸ್ತೆಯ ಆರ್.ಆರ್.ವೈದ್ಯಕೀಯ ಕಾಲೇಜು ಸಮೀಪ ನಡೆದಿದೆ. ಇದೇ ಕಾಲೇಜಿನ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಕೃತಿಕಾ (21) ಮೃತಪಟ್ಟಿದ್ದಾರೆ.
ಸ್ಕೂಟರ್ ಚಲಾಯಿಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿನಿ ಹಂಸ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಸಂಜೆ ಸುಮಾರು 4:15ರ ವೇಳೆಗೆ ಕೃತಿಕಾ ಮತ್ತು ಹಂಸ ಸ್ಕೂಟರ್‌ನಲ್ಲಿ ಆರ್.ಆರ್.ವೈದ್ಯಕೀಯ ಕಾಲೇಜು ನಿರ್ಗಮನ ದ್ವಾರದಿಂದ ಮೈಸೂರು ರಸ್ತೆಯತ್ತ ತೆರಳುತ್ತಿದ್ದರು. ಈ ವೇಳೆ ಮೈಸೂರು ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ ಚಲಾಯಿಸುತ್ತಿದ್ದ ಹಂಸ ರಸ್ತೆಯ ಎಡಭಾಗಕ್ಕೆ ಬಿದ್ದರೆ, ಹಿಂಬದಿ ಸವಾರಿ ಮಾಡುತ್ತಿದ್ದ ಕೃತಿಕಾ ಬಲಭಾಗಕ್ಕೆ ಬಿದ್ದಿದ್ದಾರೆ. ದುರ್ಘಟನೆಯಲ್ಲಿ ಕೃತಿಕಾ ಅವರ ದೇಹದ ಮೇಲೆ ಟಿಪ್ಪರ್ ಲಾರಿಯ ಚಕ್ರ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿ ಹಂಸ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.






