ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆ!
ಚಿಕ್ಕಮಗಳೂರು: ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಶವವಾಗಿ ಪತ್ತೆಯಾಗಿದ್ದಾಳೆ. ಅರಿಶಿನಗುಪ್ಪಿಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಸುಮಾರು 1500 ಅಡಿ ಆಳದ ಪ್ರಪಾತದಲ್ಲಿ ಶವ ಕಂಡುಬಂದಿದೆ.
ಮಂಗಳವಾರ (ಏಪ್ರಿಲ್ 7) ಸಂಜೆ ಮಾಣಿಕ್ಯಾಧಾರ ಜಲಪಾತ ವೀಕ್ಷಣೆಗೆ ತೆರಳಿದ ವೇಳೆ ಬಾಲಕಿ ನಾಪತ್ತೆಯಾಗಿದ್ದಳು. ಹಂಪಿ ಪ್ರವಾಸ ಮುಗಿಸಿ 41 ಮಂದಿ ಕುಟುಂಬ ಸದಸ್ಯರೊಂದಿಗೆ ಇಲ್ಲಿ ಬಂದಿದ್ದ ಶ್ರೀನಂದಾ, ಕಾಣೆಯಾಗುವ ಕೆಲವೇ ನಿಮಿಷಗಳ ಮೊದಲು ತಂದೆಯ ಮೊಬೈಲ್‌ನಲ್ಲಿ ಸಂತೋಷದಿಂದ ರೀಲ್ಸ್ ಚಿತ್ರೀಕರಿಸಿದ್ದಳು.
ಆದರೆ ಜನಸಂದಣಿಯ ನಡುವೆ ಮೆಟ್ಟಿಲುಗಳನ್ನು ಇಳಿಯುವಾಗ ಆಕೆಯು ಹಠಾತ್ತನೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಆಕೆಯ ಮೃತದೇಹ ಪತ್ತೆಯಾಗಿರುವುದು ದುಃಖ ತಂದಿದೆ.
ಬಾಲಕಿ ನಾಪತ್ತೆಯಾದ ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡಗಳು ಥರ್ಮಲ್ ಡ್ರೋನ್ ಸಹಾಯದಿಂದ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ 100ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ತಂಡಗಳಾಗಿ ವಿಭಜನೆಗೊಂಡು ಹುಡುಕಾಟ ನಡೆಸಿದ್ದರು.
ಘಟನೆ ನಡೆದ ಪ್ರದೇಶ ತೀವ್ರವಾಗಿ ಕಡಿದಾದ ಹಾಗೂ ಅಪಾಯಕಾರಿ ಪ್ರದೇಶವಾಗಿರುವುದರಿಂದ ಸಾಧ್ಯವಿರುವ ಎಲ್ಲಾ ಮಾರ್ಗಗಳಲ್ಲಿ ಶೋಧ ನಡೆಸಲಾಗಿದೆ. ಆದರೆ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಲು ಸಾಧ್ಯವಾಗದೆ ಎಲ್ಲರಲ್ಲೂ ವಿಷಾದ ಮೂಡಿಸಿದೆ.
