ಧಾರವಾಡದಲ್ಲಿ ಯೂತ್ ಕಾಂಗ್ರೆಸ್ ನಾಯಕರ ಹತ್ಯೆ: ಮನೆಗೆ ನುಗ್ಗಿ ಬರ್ಬರ ಕೊಲೆ!
ಧಾರವಾಡ: ಅವಳಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ ಅವರನ್ನು ಧಾರವಾಡ ನಗರದ ಹಾಶ್ಮಿ ನಗರದಲ್ಲಿರುವ ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕೃತ್ಯವನ್ನು ಸುಮಾರು ಆರು ಮಂದಿ ಸೇರಿ ನಡೆಸಿರುವ ಸಾಧ್ಯತೆ ವ್ಯಕ್ತವಾಗಿದೆ. ಮೊಹಮ್ಮದ್ ಶಾ, ಸದ್ದಾಂ, ಗೌಸ್ ಹಾಗೂ ಪರ್ವೇಜ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳೆಂದು ತಿಳಿದುಬಂದಿದೆ.
ಇದೇ ವೇಳೆ, ಕೊಲೆ ಸಂಚು ರೂಪಿಸಿದ್ದ ಅರ್ಬಾಜ್ ಪಠಾಣ್ ಮತ್ತು ಗುಲಾಬ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆ ನಡೆಸಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ವೈಯಕ್ತಿಕ ಹಾಗೂ ರಾಜಕೀಯ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
