ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು!

tnit editors
1 Min Read

ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು!

ಬೆಂಗಳೂರು: ದೇಶದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಸಂಪರ್ಕಕ್ಕೆ ಮಹತ್ವದ ಉತ್ತೇಜನ ದೊರೆತಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಹೊಸ ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವಿನ ಸಂಪರ್ಕವನ್ನು ಕಲ್ಪಿಸಲಿದೆ.

ಈ ಯೋಜನೆಗೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರ ನಿರಂತರ ಪ್ರಯತ್ನಗಳು ಕಾರಣವಾಗಿವೆ. ಡಿಸೆಂಬರ್ 2ರಂದು ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿಯ ಅಧ್ಯಯನ ಭೇಟಿ ವೇಳೆ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸಲು ಒತ್ತಾಯಿಸಿದ್ದರು. ಜೊತೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ಆರಂಭ ಅಥವಾ ಅಂತಿಮ ನಿಲ್ದಾಣವನ್ನಾಗಿ ಪರಿಗಣಿಸಲು ಸೂಚಿಸಿದ್ದರು.

ಪ್ರಸ್ತುತ ಈ ಮಾರ್ಗದಲ್ಲಿ ಅನೇಕ ರೈಲುಗಳು ಸಂಚರಿಸುತ್ತಿದ್ದರೂ, ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ನೇರ ಸಂಪರ್ಕ ಒದಗಿಸುತ್ತದೆ. ಸುಮಾರು 1,136 ಕಿಲೋಮೀಟರ್ ದೂರವನ್ನು ಈ ರೈಲು 23ರಿಂದ 24 ಗಂಟೆಗಳ ಅವಧಿಯಲ್ಲಿ ಕವರ್ ಮಾಡುತ್ತದೆ.

ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯವಾದರೆ, ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚು ವೇಗದ ಹಾಗೂ ಆರಾಮದಾಯಕ ಸೇವೆ ಲಭ್ಯವಾಗಲಿದೆ.

Share This Article