ಸರ್ಕಾರಿ ನೌಕರರಿಗೆ ಸಂಬಳ ವಿಳಂಬ? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ
ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಹಿನ್ನಲೆಯಲ್ಲಿ ಏಪ್ರಿಲ್ 22ರವರೆಗೆ ಬಹುತೇಕ ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗಿಲ್ಲ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ದುರಾಡಳಿತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ನೀತಿಗಳ ವೈಫಲ್ಯ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ. ಇದರ ಪರಿಣಾಮವಾಗಿ ಸುಮಾರು 5 ಲಕ್ಷ ಸರ್ಕಾರಿ ನೌಕರರಲ್ಲಿ ಬಹುತೇಕ ಮಂದಿಗೆ ಏಪ್ರಿಲ್ 22ರವರೆಗೆ ಸಂಬಳ ನೀಡಲಾಗಿಲ್ಲ ಎಂದು ದೂರಿದ್ದಾರೆ.ಕಳೆದ ವರ್ಷ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಎರಡು ತಿಂಗಳು ನೀಡದೇ ವಿಳಂಬ ಮಾಡಿದ್ದ ಸರ್ಕಾರ, ಈ ವರ್ಷ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಮಾರ್ಚ್ ಅಂತ್ಯಕ್ಕೆ ಖಜಾನೆಯಲ್ಲಿದ್ದ ಹಣವನ್ನು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂಚಿದೆ ಎಂದು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರಕ್ಕೆ ತೊಂದರೆ ಉಂಟಾಗಿದೆ ಎಂದು ಹೇಳಿದ್ದಾರೆ.ಇನ್ನೂ, ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನರ್‌ರಚನೆ ಹಾಗೂ ಆಂತರಿಕ ರಾಜಕೀಯ ಬಿಕ್ಕಟ್ಟುಗಳ ನಡುವೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವೈಯಕ್ತಿಕ ರಾಜಕೀಯ ವಿಚಾರಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ನೇರ ಪರಿಣಾಮ ರಾಜ್ಯದ ಜನರ ಮೇಲೆ ಬೀಳುತ್ತಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.



