SSLC ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟ: 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ–1ರ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ.
ಸಚಿವರ ಸುದ್ದಿಗೋಷ್ಠಿಯ ನಂತರ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಹೈಕೋರ್ಟ್ ಆದೇಶದ ಹಿನ್ನೆಲೆ, ಹಿಂದಿ ಸೇರಿ ತೃತೀಯ ಭಾಷೆಗೆ ಈ ಬಾರಿ ಗ್ರೇಡ್ ಬದಲಾಗಿ ಅಂಕಗಳನ್ನು ನೀಡಲಾಗಿದೆ.
ಹಿಂದಿನಂತೆ 525 ಅಂಕಗಳ ಬದಲು ಈ ಬಾರಿ ಒಟ್ಟು 625 ಅಂಕಗಳಿಗೆ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಮೊದಲು ತೃತೀಯ ಭಾಷೆಗೆ ಗ್ರೇಡ್ ನೀಡುವುದರಿಂದ 525 ಅಂಕಗಳಿಗೆ ಫಲಿತಾಂಶ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಹೈಕೋರ್ಟ್ ನಿರ್ದೇಶನದ ನಂತರ ಶಿಕ್ಷಣ ಇಲಾಖೆ ಹಳೆಯ ಪದ್ಧತಿಗೆ ಮರಳಿ 625 ಅಂಕಗಳಿಗೆ ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.
ಈ ವರ್ಷ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯದಾದ್ಯಂತ 2,871 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ವಿಶೇಷವೆಂದರೆ, ಈ ಬಾರಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿ DigiLocker ನಲ್ಲಿ ಲಭ್ಯವಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದೇ ವೇಳೆ ಫಲಿತಾಂಶವನ್ನು Karnataka Results Portal ವೆಬ್ಸೈಟ್ ಮತ್ತು Karnataka One ಮೊಬೈಲ್ ಆಪ್ನಲ್ಲಿಯೂ ಪರಿಶೀಲಿಸಬಹುದು.



