No menu items!
10.4 C
Munich
Thursday, April 23, 2026

ಕೇವಲ 500 ರೂ. ಕೂಲಿಗೆ ನಡೆದ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

Must read

ಕೇವಲ 500 ರೂ. ಕೂಲಿಗೆ ನಡೆದ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

ಶಿರಸಿ: ಕೇವಲ 500 ರೂಪಾಯಿ ಕೂಲಿ ಹಣದ ಬಾಕಿ ವಿಚಾರವಾಗಿ ಉಂಟಾದ ಜಗಳವು ಕೊಲೆ ಪ್ರಕರಣವಾಗಿ ತಿರುಗಿದ ಹಿನ್ನೆಲೆಯಲ್ಲಿ, ಆರೋಪಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮಂಜುನಾಥ ಚೆನ್ನಯ್ಯ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಸಮೀಪದ ಕಮಟಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೃತ ರವೀಶ್ ಚೆನ್ನಯ್ಯ ಅವರು ತೋಟ ಮತ್ತು ಗದ್ದೆ ಕೆಲಸಗಳ ಗುತ್ತಿಗೆ ಪಡೆಯುವ ಶೇರುಗಾರರಾಗಿದ್ದರು. ಅವರ ಬಳಿ ಮಂಜುನಾಥ ಚೆನ್ನಯ್ಯ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಇವರಿಬ್ಬರ ನಡುವೆ 500 ರೂಪಾಯಿ ಕೂಲಿ ಹಣದ ಬಾಕಿ ವಿಚಾರವಾಗಿ ಆಗಾಗ್ಗೆ ವಾಗ್ವಾದ ನಡೆಯುತ್ತಿತ್ತು.

2025ರ ಆಗಸ್ಟ್ 8ರಂದು ಹಣದ ವಿಚಾರವಾಗಿ ಮಂಜುನಾಥ ಗಲಾಟೆ ಮಾಡಿದ್ದಾಗ, ರವೀಶ್ ಅವರು ಎರಡು ದಿನಗಳಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಆಗಸ್ಟ್ 14ರಂದು ಮತ್ತೆ ಕೆಲಸಕ್ಕೆ ಕರೆದಾಗ, ಹಳೆಯ ಹಣದ ಸಿಟ್ಟಿನಿಂದ ಮಂಜುನಾಥ ರಾತ್ರಿ ವೇಳೆ ಕಬ್ಬಿಣದ ಗುದ್ದಲಿಯಿಂದ ರವೀಶ್ ಅವರ ತಲೆಗೆ ಭೀಕರವಾಗಿ ಹೊಡೆದಿದ್ದನು. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ರವೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು.

ತನಿಖೆಯ ವೇಳೆ ಪೊಲೀಸರು ಬೆಚ್ಚಿಬೀಳುವಂತಹ ಮಾಹಿತಿ ಬಹಿರಂಗಗೊಂಡಿತ್ತು. ಆರೋಪಿ ಮಂಜುನಾಥ ಈ ಹಿಂದೆ ತನ್ನ ಮಾವನ ಕೊಲೆ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರಬಂದ ನಂತರವೂ ಅವನ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ.

ಮೃತರ ಪತ್ನಿ ಚೇತನಾ ಚೆನ್ನಯ್ಯ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಅವರು, ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದ್ದಾರೆ.

ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ ಜೊತೆಗೆ 25,000 ರೂಪಾಯಿ ದಂಡ ವಿಧಿಸಲಾಗಿದೆ. ಇದಲ್ಲದೆ, ಮೃತರ ಪತ್ನಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ಸರ್ಕಾರದ ಪರವಾಗಿ ಬಲವಾದ ವಾದ ಮಂಡಿಸಿದ್ದರು. ಕೇವಲ 500 ರೂಪಾಯಿಗಾಗಿ ನಡೆದ ಈ ದಾರುಣ ಹತ್ಯೆ ಮತ್ತು ಅದಕ್ಕೆ ವಿಧಿಸಿದ ಕಠಿಣ ಶಿಕ್ಷೆ ಸಮಾಜಕ್ಕೆ ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿದೆ.

- Advertisement -spot_img

More articles

- Advertisement -spot_img

Latest article