No menu items!
17.7 C
Munich
Friday, April 24, 2026

ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್: ಸಂತ್ರಸ್ತೆಗೆ ತಿಂಗಳಿಗೆ ₹75 ಸಾವಿರ ನೀಡಲು ಹೈಕೋರ್ಟ್ ಆದೇಶ

Must read

ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್: ಸಂತ್ರಸ್ತೆಗೆ ತಿಂಗಳಿಗೆ ₹75 ಸಾವಿರ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: 21 ವರ್ಷದ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಮಗುವಿಗೆ ಜನ್ಮ ನೀಡುವಂತೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಸಂತ್ರಸ್ತೆ ಮತ್ತು ಆಕೆಯ ಮಗುವಿನ ಪೋಷಣೆಗೆ ಆರೋಪಿಯು ಪ್ರತಿ ತಿಂಗಳು ₹75,000 ಪಾವತಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಆದೇಶಿಸಿದೆ.
ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡರ ಪುತ್ರ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಆರೋಪಿ ಸ್ವತಃ ಅಥವಾ ತನ್ನ ಕುಟುಂಬದ ಮೂಲಕ ಸಂತ್ರಸ್ತೆ ಮತ್ತು ಮಗುವಿನ ಅಗತ್ಯತೆಗಳನ್ನು ಪೂರೈಸಲು ಮುಂದಿನ ಒಂದು ವಾರದೊಳಗೆ ಹಣ ಪಾವತಿಸಬೇಕು. ಬಳಿಕ ಪ್ರತಿಮಾಸವೂ ಈ ಮೊತ್ತವನ್ನು ನೀಡಬೇಕು. ಈ ಷರತ್ತಿನಡಿ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಲಾಗಿದೆ.
ಇದೇ ವೇಳೆ, ಸಂತ್ರಸ್ತೆ ಹಾಗೂ ಅವರ ಕುಟುಂಬಸ್ಥರು ಈ ಪ್ರಕರಣದ ಕುರಿತು ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ನ್ಯಾಯಾಲಯ ನಿರ್ಬಂಧ ವಿಧಿಸಿದೆ.
ವಿಚಾರಣೆ ವೇಳೆ ಸಂತ್ರಸ್ತೆಯ ಪರ ವಕೀಲರು, ವಿದ್ಯಾರ್ಥಿ ಅವಧಿಯಲ್ಲಿ ಪ್ರೀತಿಯ ಹೆಸರಿನಲ್ಲಿ ಮದುವೆಯ ಭರವಸೆ ನೀಡಿ ಹಲವಾರು ಬಾರಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದರು. ಇದರ ಪರಿಣಾಮವಾಗಿ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದು, ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ ಎಂದು ತಿಳಿಸಿದರು.
ಸರ್ಕಾರದ ಪರ ವಕೀಲರು, ಆರೋಪಿ ಕುಟುಂಬದಿಂದ ಸಂತ್ರಸ್ತೆಗೆ 50 ಲಕ್ಷ ರೂ. ನೀಡಿ ಮದುವೆಯಾಗಿ ನಂತರ ವಿಚ್ಛೇದನ ಪಡೆಯುವ ಶರತ್ತು ಇಟ್ಟಿದ್ದಾರೆ ಎಂಬ ಆರೋಪವನ್ನೂ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ಆರೋಪಿಯ ಪರ ವಕೀಲರು ಈ ಆರೋಪಗಳನ್ನು ತಳ್ಳಿ ಹಾಕಿ, ಮಾಧ್ಯಮ ವರದಿಗಳಿಂದ ಕುಟುಂಬಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿದೆ.

- Advertisement -spot_img

More articles

- Advertisement -spot_img

Latest article