ತುಮಕೂರಿನಲ್ಲಿ 35 ನವಿಲುಗಳ ಸಾವು: ಬಿಸಿಲಿನ ತಾಪವೇ ಕಾರಣವೇ? ಹಕ್ಕಿ ಜ್ವರ ಶಂಕೆ
ತುಮಕೂರು: ಜಿಲ್ಲೆಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿ ಈ ವಾರದಲ್ಲೇ ಸುಮಾರು 35 ನವಿಲುಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬಿಸಿಲಿನ ತಾಪಮಾನ ತೀವ್ರವಾಗಿ ಏರಿಕೆಯಾಗಿರುವ ಹಿನ್ನೆಲೆ ಈ ಸಾವುಗಳು ಸಂಭವಿಸಿರಬಹುದೆಂದು ಪ್ರಾಥಮಿಕವಾಗಿ ಅನುಮಾನ ವ್ಯಕ್ತವಾಗಿದ್ದರೂ, ಹಕ್ಕಿ ಜ್ವರದ ಸೋಂಕಿನ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ತುಮಕೂರು ಹೊರವಲಯದ ಬೊಮ್ಮನಹಳ್ಳಿ ಹಾಗೂ ಮಾಚೇನಹಳ್ಳಿ ಸುತ್ತಮುತ್ತ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ನವಿಲುಗಳ ಸಾವುಗಳು ಸಂಭವಿಸಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ನವಿಲುಗಳ ಶವಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿವೆ.
ಇನ್ನೂ 48 ಗಂಟೆಗಳೊಳಗೆ ಪರೀಕ್ಷಾ ವರದಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಪರಿಶೀಲನೆ ಪ್ರಕಾರ, ನವಿಲುಗಳ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಕಂಡುಬಂದಿದೆ. ಅತಿಯಾದ ಉಷ್ಣತೆ ಮತ್ತು ನಿರ್ಜಲೀಕರಣವೇ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದ್ದರೂ, ಹಕ್ಕಿ ಜ್ವರದಂತಹ ಸಾಂಕ್ರಾಮಿಕ ರೋಗಗಳ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.



