ಗ್ರೇಟರ್ ಬೆಂಗಳೂರು ಚುನಾವಣೆ ದುಡ್ಡಿನ ಸಂಕಷ್ಟ: ಸುಪ್ರೀಂ ಕೋರ್ಟ್ಗೆ ಚುನಾವಣಾ ಆಯೋಗ ಮನವಿ
ಬೆಂಗಳೂರು: ರಾಜ್ಯ ರಾಜಧಾನಿಯ ಆಡಳಿತಾತ್ಮಕ ಪುನರ್ರಚನೆಯ ನಂತರ ಹೆಚ್ಚು ಕುತೂಹಲಕ್ಕೆ ಕಾರಣವಾಗಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳ ಚುನಾವಣೆಗೆ ಈಗ ಅನಿಶ್ಚಿತತೆ ಉಂಟಾಗಿದೆ. ಜೂನ್ 30ರೊಳಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯವೆಂದು ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ.ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ, ಚುನಾವಣಾ ಪ್ರಕ್ರಿಯೆ ನಡೆಸಲು ಅಗತ್ಯವಿರುವ ಹಣಕಾಸಿನ ಕೊರತೆ ಎದುರಾಗಿದೆ ಎಂದು ಹೇಳಿದೆ. ಜೊತೆಗೆ, ದೊಡ್ಡ ಪ್ರಮಾಣದ ಮತದಾನ ಕಾರ್ಯವನ್ನು ನಿರ್ವಹಿಸಲು ಬೇಕಾದಷ್ಟು ಸಿಬ್ಬಂದಿ ಲಭ್ಯವಿಲ್ಲದಿರುವುದೂ ಪ್ರಮುಖ ಅಡಚಣೆಯಾಗಿದೆ ಎಂದು ಆಯೋಗ ವಿವರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಹಕಾರ ಹಾಗೂ ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ಆಯೋಗ ಒತ್ತಿಹೇಳಿದೆ.ರಾಜ್ಯದಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯವು ಮೇ 15ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಾರ್ಯದಲ್ಲಿ ಬಹುತೇಕ ಸರ್ಕಾರಿ ಸಿಬ್ಬಂದಿ ತೊಡಗಿಸಿಕೊಂಡಿರುವುದರಿಂದ, ಜನಗಣತಿ ಮುಗಿಯುವವರೆಗೆ ಚುನಾವಣಾ ಕೆಲಸಗಳಿಗೆ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ. ಹೀಗಾಗಿ ಮೇ 15ರ ನಂತರವೇ ಐದು ನಗರ ಪಾಲಿಕೆಗಳ ಚುನಾವಣಾ ಪೂರ್ವ ಸಿದ್ಧತೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.ಬೆಂಗಳೂರು ನಗರ ಪಾಲಿಕೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 2026ರ ಜನವರಿ 12ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ಜೂನ್ 30ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸ್ಪಷ್ಟ ಸೂಚನೆ ನೀಡಿತ್ತು. ಆದರೆ ಈಗ ಉಂಟಾಗಿರುವ ತಾಂತ್ರಿಕ ಹಾಗೂ ಆರ್ಥಿಕ ಅಡಚಣೆಗಳಿಂದಾಗಿ ಆ ಗಡುವಿನೊಳಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಸರ್ಕಾರದ ಆರ್ಥಿಕ ನೆರವು ಮತ್ತು ಸಿಬ್ಬಂದಿ ನಿಯೋಜನೆಯಲ್ಲಿ ಇನ್ನಷ್ಟು ವಿಳಂಬವಾದರೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇನ್ನೂ ಕೆಲ ತಿಂಗಳು ಕಾಯಬೇಕಾಗುವ ಸಾಧ್ಯತೆ ಇದೆ.



