ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಣ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಮಹಿಳೆಯರ ಗೌಪ್ಯತೆ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದೆ. ಮಹಿಳೆಯರ ಅನುಮತಿ ಇಲ್ಲದೆ ಅವರ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಅಸ್ವೀಕಾರಾರ್ಹ ಎಂದು ಹೇಳಿ, ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳಾ ಪ್ರಯಾಣಿಕರ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದ ಆರೋಪ ಎದುರಿಸುತ್ತಿರುವ ಬಿ.ಕೆ. ದಿಗಂತ್ (28) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ವೈಫಲ್ಯ ಉಂಟಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಇಂತಹ ಕೃತ್ಯಗಳನ್ನು ಕ್ಷಮಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಆರೋಪಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ಅನುಮತಿ ಇಲ್ಲದೆ ಅವರ ಮುಂಭಾಗ ಹಾಗೂ ಹಿಂಭಾಗದ ದೃಶ್ಯಗಳನ್ನು ಗುಪ್ತವಾಗಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಖಾತೆಗೆ ಸಾವಿರಾರು ಅನುಯಾಯಿಗಳು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಷಯವನ್ನು ಸಾಮಾಜಿಕ ಜಾಲತಾಣಗಳ ಪರಿಶೀಲನೆ ವೇಳೆ ಗಮನಿಸಿದ ಬನಶಂಕರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದರು.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78(2) (ಹಿಂಬಾಲಿಕೆ), 238(ಸಿ) (ಸಾಕ್ಷ್ಯ ನಾಶ/ಸುಳ್ಳು ಮಾಹಿತಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಅಶ್ಲೀಲ ವಿಷಯ ಪ್ರಸಾರ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣಾ ನ್ಯಾಯಾಲಯವು ಆರೋಪಿಗೆ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿದಾರರ ಪರ ವಕೀಲರು, ಅಪ್ಲೋಡ್ ಮಾಡಿರುವ ವಿಡಿಯೋಗಳು ಅಶ್ಲೀಲವಾಗಿಲ್ಲ ಹಾಗೂ ನೊಂದವರು ದೂರು ನೀಡಿಲ್ಲ ಎಂದು ವಾದಿಸಿದರೂ, ನ್ಯಾಯಾಲಯ ಅದನ್ನು ಪರಿಗಣಿಸದೇ ಅರ್ಜಿಯನ್ನು ವಜಾಗೊಳಿಸಿದೆ.



