ಬೆಲೆ ಏರಿಕೆ ವಿರುದ್ಧ ಡಿಕೆ ಶಿವಕುಮಾರ್ ಕಿಡಿ: ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದ ಡಿಸಿಎಂ
ಬೆಂಗಳೂರು: ಬೆಲೆ ಏರಿಕೆಯ ಹಿನ್ನೆಲೆ ಜನಸಾಮಾನ್ಯರ ಸಂಕಷ್ಟವನ್ನು ಉಲ್ಲೇಖಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಗಾಂಧಿನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಲ್ಲಾ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ಆದಾಯ ಕುಸಿದಿದೆ. ಈ ಸ್ಥಿತಿಗೆ ಹೊಣೆ ಯಾರು?” ಎಂದು ಪ್ರಶ್ನಿಸಿದರು.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಅಂತಿಮವಾಗಿ ಜನರ ಮೇಲೇ ಬೀಳುತ್ತದೆ. ಇದರಿಂದ ಅನೇಕ ಹೊಟೇಲ್ಗಳು ಸಂಕಷ್ಟಕ್ಕೀಡಾಗಿವೆ, ಕೆಲವು ಬಂದ್ ಆಗಿವೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಬೇಕು” ಎಂದು ಒತ್ತಾಯಿಸಿದರು.
ಇನ್ನೂ ಅಂತರರಾಷ್ಟ್ರೀಯ ಪರಿಸ್ಥಿತಿಗಳ ಕುರಿತು ಮಾತನಾಡಿದ ಅವರು, “ಯುದ್ಧದಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವುದು ಅತ್ಯವಶ್ಯ. ಭಾರತಕ್ಕೆ ಬೆಂಬಲ ನೀಡಿದ ರಾಷ್ಟ್ರಗಳೊಂದಿಗೆ ನಂಟು ಬಲಪಡಿಸುವಲ್ಲಿ ವಿದೇಶಾಂಗ ನೀತಿ ವಿಫಲವಾಗಬಾರದು” ಎಂದು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರದೇಶಾಭಿವೃದ್ಧಿಗೆ 600 ಕೋಟಿ ರೂಪಾಯಿ ಅನುದಾನ ನೀಡಿದ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅದರನ್ನೇ ಏಕೆ ದೊಡ್ಡದಾಗಿ ತೋರಿಸುತ್ತೀರಿ? ಇದೇ ಸಭೆಯಲ್ಲಿ ಸುಮಾರು 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಸಮೀಪ ಸ್ಯಾಟಲೈಟ್ ಟೌನ್ಶಿಪ್ ನಿರ್ಮಾಣಕ್ಕೂ ಅನುಮೋದನೆ ನೀಡಲಾಗಿದೆ. ಇಂತಹ ಪ್ರಮುಖ ಯೋಜನೆಗಳನ್ನು ಬಿಟ್ಟು ಒಂದೇ ವಿಷಯವನ್ನು ಮಾತ್ರ ಏಕೆ ಹೈಲೈಟ್ ಮಾಡುತ್ತೀರಿ?” ಎಂದು ಪ್ರಶ್ನಿಸಿದರು.



