ಲಾಲು ಯಾದವ್ ಗೆ ಸುಪ್ರೀಂ ಕೋರ್ಟ್ʼನಿಂದ ರಿಲೀಫ್: ಜಾಮೀನು ರದ್ದತಿಗೆ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕಾರ

0
80

ಲಾಲು ಯಾದವ್ ಗೆ ಸುಪ್ರೀಂ ಕೋರ್ಟ್ʼನಿಂದ ರಿಲೀಫ್: ಜಾಮೀನು ರದ್ದತಿಗೆ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕಾರ

ನವದೆಹಲಿ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಲಾಲು ಯಾದವ್ ಅವರಿಗೆ ನೀಡಲಾಗಿದ್ದ ಜಾಮೀನು ಮುಂದುವರಿಯಲಿದ್ದು, ಸಿಬಿಐಗೆ ಹಿನ್ನಡೆಯಾಗಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಹಾಗೂ ಪಿ.ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು, 2019ರಿಂದ ಜಾರಿಯಲ್ಲಿರುವ ಜಾರ್ಖಂಡ್ ಹೈಕೋರ್ಟ್ನ ಜಾಮೀನು ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಪ್ರಕರಣದ ವಿಚಾರಣೆ ವೇಳೆ, ಈ ಮೇಲ್ಮನವಿ ಹಲವು ವರ್ಷಗಳಿಂದ ಬಾಕಿ ಉಳಿದಿರುವುದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಮತ್ತಷ್ಟು ವಿಳಂಬಗೊಳಿಸುವ ಬದಲು ಮೇವು ಹಗರಣಕ್ಕೆ ಸಂಬಂಧಿಸಿದ ಮುಖ್ಯ ಮೇಲ್ಮನವಿಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಜಾರ್ಖಂಡ್ ಹೈಕೋರ್ಟ್ಗೆ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಲಾಲು ಪ್ರಸಾದ್ ಯಾದವ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದಿಯೋಗಢ ಖಜಾನೆಯಿಂದ ಅಕ್ರಮವಾಗಿ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ವಾದಿಸಿದರು. ಅಲ್ಲದೆ, ಶಿಕ್ಷೆಯ ಶೇ.50ರಷ್ಟು ಅವಧಿ ಪೂರ್ಣಗೊಂಡಿದೆ ಎಂಬ ತಪ್ಪು ಲೆಕ್ಕಾಚಾರದ ಆಧಾರದ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.
ಇದಕ್ಕೆ ಪ್ರತಿಯಾಗಿ ಲಾಲು ಪ್ರಸಾದ್ ಯಾದವ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಹೈಕೋರ್ಟ್ ಕಾನೂನುಬದ್ಧವಾಗಿ ತನ್ನ ವಿವೇಚನಾ ಅಧಿಕಾರವನ್ನು ಬಳಸಿಕೊಂಡು ಜಾಮೀನು ಮಂಜೂರು ಮಾಡಿದೆ. ಸಿಬಿಐ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಕಾನೂನು ಆಧಾರ ಇಲ್ಲ ಎಂದು ವಾದಿಸಿದರು.
ಎರಡೂ ಪಕ್ಷಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಜೊತೆಗೆ, ಮೂಲ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಜಾರ್ಖಂಡ್ ಹೈಕೋರ್ಟ್ಗೆ ಸೂಚನೆ ನೀಡಿದೆ.