ಶೃಂಗೇರಿ ಅಂಚೆ ಮತ ಪ್ರಕರಣ: ಶಾಸಕ ಜೀವರಾಜ್ ವಿರುದ್ಧದ ಎಫ್ ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು/ಚಿಕ್ಕಮಗಳೂರು: ಅಂಚೆ ಮತ ತಿರುಚಿದ ಆರೋಪದ ಮೇಲೆ ಶೃಂಗೇರಿ ಶಾಸಕ ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀಶಾನಂದ ಅವರ ರಜಾಕಾಲದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ವಿಶೇಷ ಸರ್ಕಾರಿ ವಕೀಲ (ಎಸ್ಪಿಪಿ) ಬೆಳ್ಳಿಯಪ್ಪ ಅವರನ್ನೂ ತರಾಟೆಗೆ ತೆಗೆದುಕೊಂಡಿತು.
“2023ರ ಮೇ 13ರಂದು ನಡೆದ ಘಟನೆಗೆ ಈಗ ಎಫ್ಐಆರ್ ದಾಖಲಿಸುವುದು ಹೇಗೆ ಸಾಧ್ಯ? ಮತ ತಿರುಚುವ ವಿಚಾರವನ್ನು ಮೊದಲು ಕೋರ್ಟ್ ಗಮನಕ್ಕೆ ತರದೇ ನಂತರ ಎಫ್ಐಆರ್ ಮಾಡುವುದು ಸರಿಯೇ?” ಎಂದು ಪ್ರಶ್ನಿಸಿದ ನ್ಯಾಯಮೂರ್ತಿ, ತನಿಖಾಧಿಕಾರಿಯ ಮೇಲೂ ಕಿಡಿಕಾರಿದರು. “ಸೋತವರು ಒಳಸಂಚು ಮಾಡುತ್ತಾರೆ. ತನಿಖಾಧಿಕಾರಿಯನ್ನು ಕರೆಸಿ, ಕಣ್ಣು ಕಾಣುವುದಿಲ್ಲವೇ? ಸಸ್ಪೆಂಡ್ ಮಾಡಬೇಕಾ?” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, 2023ರ ಜಿಲ್ಲಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿದ ನ್ಯಾಯಾಲಯ, ಪ್ರಸ್ತುತ ಚುನಾವಣಾಧಿಕಾರಿ ಗೌರವ್ ಶೆಟ್ಟಿಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿತು. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಎಫ್ಐಆರ್ ದಾಖಲಿಸಬಾರದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಹೈಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದಿದ್ದ ಸಂದರ್ಭದಲ್ಲಿ, ಸೀಲ್ ಇಲ್ಲದಿರುವುದು ಅಥವಾ ಡಬಲ್ ಟಿಕ್ ಇರುವಂತಹ ಅಂಶಗಳನ್ನು ಏಕೆ ಕೋರ್ಟ್ ಗಮನಕ್ಕೆ ತರಲಿಲ್ಲ ಎಂದು ಎಸ್ಪಿಪಿ ಮೇಲೆ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ದೂರುದಾರ ಸುಧೀರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ, ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿ, ಎಫ್ಐಆರ್ಗೆ ಮಧ್ಯಂತರ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಲಾಗಿದೆ.



