No menu items!
8.9 C
Munich
Thursday, May 7, 2026

ಪಕ್ಕದಲ್ಲೇ ಇದ್ದ ದುಷ್ಮನ್‌ ; ಸಚಿವ ಜಮೀರ್ ಅಹಮದ್ ಮನೆಯಲ್ಲಿ 1.2 ಕೆಜಿ ಚಿನ್ನ ಕಳ್ಳತನ ಮಾಡಿದ ಸಂಬಂಧಿಕರು

Must read

ನಂಬಿಕೆ ಅಮೂಲ್ಯವಾದದ್ದು. ಆದರೆ ಈಗೀಗ ನಂಬಿಕೆ ದ್ರೋಹ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಹಣದಾಸೆಗೆ ರಕ್ತ ಸಂಬಂಧಿಗಳೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಇದಕ್ಕೆ ರಾಜ್ಯದ ಪ್ರಬಲ ರಾಜಕಾರಣಿ, ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳ ಕಳ್ಳತನದ ಪ್ರಕರಣವೇ ಅತ್ಯುತ್ತಮ ಸಾಕ್ಷಿ.

ಹೌದು, ಬೆಂಗಳೂರಿನ ಕಂಟೋನ್ಮೆಂಟ್ ರುವ ಜಮೀರ್ ಅಹ್ಮದ್ ಅವರ ಮನೆಯ ಸುತ್ತ ಸದಾ ಭದ್ರತೆ ಇರುತ್ತೆ. ಸಿಸಿಟಿವಿ ಕಣ್ಗಾವಲಿರುತ್ತೆ. ಆದರೂ ಕೂಡ ಜಮೀರ್ ಮನೆಯಲ್ಲಿ 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮಾಯವಾಗಿದೆ. ಶಿವಾಜಿನಗರ ಪೊಲೀಸರು ಈ ಪ್ರಕರಣದ ಬೆನ್ನತ್ತಿದಾಗ ಸಿಕ್ಕ ಸ್ಫೋಟಕ ಮಾಹಿತಿ ಖುದ್ದು ಸಚಿವರ ಕುಟುಂಬವನ್ನೇ ಬೆಚ್ಚಿಬೀಳಿಸಿದೆ. ಯಾಕಂದ್ರೆ, ಈ ಕಳ್ಳತನದ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಜಮೀರ್ ಅವರ ತಾಯಿಯ ಅತ್ಯಂತ ಹತ್ತಿರದ ಸಂಬಂಧಿ ಸೈಯದ್ ಅಮೀರ್.

ಸೈಯದ್ ಅಮೀರ್ ಮತ್ತು ಆತನ ಗೆಳೆಯ ಅಮೀರ್ ಅಹ್ಮದ್ ಸೇರಿ ಈ ಖತರ್ನಾಕ್ ಸ್ಕೆಚ್ ಹಾಕಿದ್ದರು. ಸೈಯದ್‌ಗೆ ಜಮೀರ್ ಮನೆ ಅಂದ್ರೆ ಅದು ತನ್ನ ಸ್ವಂತ ಮನೆಯಿದ್ದಂತೆ ಇತ್ತು. ಸಂಬಂಧಿ ಎಂಬ ಕಾರಣಕ್ಕೆ ಆತನಿಗೆ ಮನೆಯೊಳಗೆ ಮುಕ್ತ ಪ್ರವೇಶವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಈತ, 2023ರಿಂದಲೇ ಯಾರಿಗೂ ಅನುಮಾನ ಬಾರದಂತೆ ಸ್ವಲ್ಪ ಸ್ವಲ್ಪವೇ ಚಿನ್ನದ ಆಭರಣಗಳನ್ನು ಲಪಟಾಯಿಸಲು ಶುರು ಮಾಡಿದ್ದ. ಒಳ್ಳೆಯವನಂತೆ ನಟಿಸುತ್ತಾ, ಮನೆಯವರ ವಿಶ್ವಾಸ ಗಳಿಸುತ್ತಲೇ ಈ ಖದೀಮ ಒಟ್ಟು 1 ಕೆಜಿ 200 ಗ್ರಾಂ ಚಿನ್ನಕ್ಕೆ ಕನ್ನ ಹಾಕಿದ್ದಾನೆ.

ಅಸಲಿಗೆ ಈ ಕಳ್ಳತನದ ಹಿಂದೆ ‘ರಿಯಲ್ ಎಸ್ಟೇಟ್’ ಕನಸಿನ ಕಥೆಯಿದೆ. ಆರೋಪಿಗಳಿಬ್ಬರು ಟ್ರಾವೆಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ ಕೋವಿಡ್ ಲಾಕ್‌ಡೌನ್‌ನಿಂದ ಉದ್ಯಮ ಪಾತಾಳಕ್ಕೆ ಕುಸಿದು, ಸಾಲದ ಸುಳಿಗೆ ಸಿಲುಕಿದ್ದರು. ಎಲ್ಲಿಯೂ ಸಾಲ ಸಿಗದಿದ್ದಾಗ ಸೈಯದ್ ಕಣ್ಣು ಬಿದ್ದಿದ್ದೇ ಸಂಬಂಧಿ ಜಮೀರ್ ಅವರ ಮನೆಯ ಚಿನ್ನದ ಮೇಲೆ. ಮನೆಯ ಚಿನ್ನ ಕದ್ದು, ಅದನ್ನ ಅಡವಿಟ್ಟು ಬಂದ ಹಣದಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿ ಕೋಟ್ಯಧಿಪತಿಯಾಗುವ ದುರಾಸೆ ಈತನದ್ದಾಗಿತ್ತು.

ಆದರೆ, ಪಾಪದ ಕೊಡ ಒಂದಿಲ್ಲೊಂದು ದಿನ ತುಂಬಲೇಬೇಕು. ಮನೆಯಲ್ಲಿ ಚಿನ್ನ ಕಾಣೆಯಾಗುತ್ತಿರುವ ವಿಚಾರ ಕುಟುಂಬಸ್ಥರ ಗಮನಕ್ಕೆ ಬರುತ್ತಿದ್ದಂತೆ ಸೈಯದ್ ಅಮೀರ್ ಅಲರ್ಟ್ ಆಗಿದ್ದ. ಹಗಲು ರಾತ್ರಿ ಜಮೀರ್ ಮನೆಯಲ್ಲೇ ಇರುತ್ತಿದ್ದವನು ದಿಢೀರ್ ಅಂತ ಬರೋದನ್ನೇ ನಿಲ್ಲಿಸಿದ್ದ. ಮನೆಯವರು ಫೋನ್ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಯಾವಾಗ ಈತ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡನೋ, ಆಗಲೇ ಈತನ ಮೇಲೆ ಅನುಮಾನದ ಮುಳ್ಳು ನೆಟ್ಟಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ ಕುಟುಂಬಸ್ಥರು, ತನಿಖೆಗೆ ಒತ್ತಾಯಿಸಿದ್ದಾರೆ.

ದೂರು ಸ್ವೀಕರಿಸಿದ ಶಿವಾಜಿನಗರ ಪೊಲೀಸರು ಬಲೆ ಬೀಸಿದ್ದಾರೆ. ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆ ವೇಳೆ ಖದೀಮರು ತಮ್ಮ ಕಳ್ಳತನದ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಬಂಧಿತರಿಂದ ಪೊಲೀಸರು ಸದ್ಯ 759 ಗ್ರಾಂ ಚಿನ್ನಾಭರಣಗಳನ್ನು ರಿಕವರಿ ಮಾಡಿದ್ದಾರೆ. ಬ್ಯುಸಿನೆಸ್ ನಷ್ಟ ಸರಿದೂಗಿಸಲು ಸ್ವಂತ ಸಂಬಂಧಿಯ ಮನೆಯನ್ನೇ ಲೂಟಿ ಮಾಡಿದ ಸೈಯದ್ ಅಮೀರ್‌ನ ನಂಬಿಕೆ ದ್ರೋಹ ಈಗ ಜಮೀರ್ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಸದ್ಯ ಆರೋಪಿಗಳು ಕಂಬಿ ಎಣಿಸುತ್ತಿದ್ದು, ಅತೀ ಆಸೆಯೇ ಗತಿಗೇಡು ಅನ್ನೋದು ಈ ಇಬ್ಬರಿಗೂ ಈಗ ಚೆನ್ನಾಗಿ ಅರ್ಥ ಆಗಿರಬೇಕು.

- Advertisement -spot_img

More articles

- Advertisement -spot_img

Latest article