No menu items!
11.8 C
Munich
Friday, May 8, 2026

ಎಸ್ಪಿ ಗನ್ ಮ್ಯಾನ್ ನಿಂದಲೇ ಹಣ ವಸೂಲಿ ಆರೋಪ; ಬಳ್ಳಾರಿಯಲ್ಲಿ 3 ಲಕ್ಷ ರೂ. ದಂಧೆ ಬಯಲು

Must read

ಎಸ್ಪಿ ಗನ್ಮ್ಯಾನ್ನಿಂದಲೇ ಹಣ ವಸೂಲಿ ಆರೋಪ; ಬಳ್ಳಾರಿಯಲ್ಲಿ 3 ಲಕ್ಷ ರೂ. ದಂಧೆ ಬಯಲು

ಬಳ್ಳಾರಿ: ಬೇಲಿಯೇ ಎದ್ದು ಹೊಲ ಮೇಯ್ದಂತೆಯೇ, ಜಿಲ್ಲೆಯ ಎಸ್ಪಿ ಗನ್ಮ್ಯಾನ್ನಿಂದಲೇ 3 ಲಕ್ಷ ರೂಪಾಯಿ ಹಣ ವಸೂಲಿ ನಡೆದಿರುವ ಆರೋಪ ಬೆಳಕಿಗೆ ಬಂದಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರ ಗನ್ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿದ್ದಾರೆ.
ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಶರಭಯ್ಯ ಎಂಬುವರಿಂದ ಹಣ ವಸೂಲಿ ಮಾಡಿದ ಆರೋಪದಡಿ ದೇವರಾಜ್ ಹಾಗೂ ಆತನ ಸಹಚರರನ್ನು ಮೋಕಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ:
ಮಡಕೇರಿಯಿಂದ ಆಂಧ್ರಪ್ರದೇಶದತ್ತ ಪಡಿತರ ಅಕ್ಕಿ ತುಂಬಿಕೊಂಡು ಸಾಗುತ್ತಿದ್ದ ಎರಡು ಲಾರಿಗಳನ್ನು ಆರೋಪಿಗಳು ಅಡ್ಡಗಟ್ಟಿದ್ದರು. ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಪ್ರಕರಣ ದಾಖಲಿಸದೇ ಬಿಡಲು ಐದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬಳಿಕ ಮಾತುಕತೆಯ ನಂತರ ಮೂರು ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಲಾರಿಗಳನ್ನು ಜಪ್ತಿ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಯೆಂದು ಶರಭಯ್ಯ ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ, ದೇವರಾಜ್ ಎಸ್ಪಿ ಸ್ಕ್ವಾಡ್ ಹೆಸರನ್ನು ದುರುಪಯೋಗಪಡಿಸಿಕೊಂಡು ಹಣ ವಸೂಲಿ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಎಸ್ಪಿ ಸುಮನ್ ಡಿ. ಪನ್ನೇಕರ್ ಸ್ವತಃ ಕಠಿಣ ಕ್ರಮಕ್ಕೆ ಮುಂದಾಗಿ ದೇವರಾಜ್ ಬಂಧನಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬರುವ ಸಾಧ್ಯತೆಯಿದೆ.

- Advertisement -spot_img

More articles

- Advertisement -spot_img

Latest article