ಜಿಬಿಎ ಚುನಾವಣೆ: ಜೂನ್ 14ರಿಂದ 24ರೊಳಗೆ ದಿನಾಂಕ ಘೋಷಣೆಗೆ ಸೂಚನೆ ಬೆಂಗಳೂರು: ಬಹುಕಾಲದಿಂದ ನಿರೀಕ್ಷೆ ಮೂಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಮುಂದಿನ ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎ. ಸಂಗ್ರೇಶಿ ಸೂಚನೆ ನೀಡಿದ್ದಾರೆ.ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಿತು. ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಭೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯುಕ್ತ ಜಿ.ಎ. ಸಂಗ್ರೇಶಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಎ. ಸಂಗ್ರೇಶಿ, ಜೂನ್ 14ರಿಂದ 24ರೊಳಗಿನ ಅವಧಿಯಲ್ಲಿ ಚುನಾವಣಾ ದಿನಾಂಕ ನಿಗದಿಪಡಿಸುವಂತೆ ಜಿಬಿಎಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸಬೇಕೆಂಬ ಕಾನೂನುಬದ್ಧ ನಿಯಮ ಇರುವುದರಿಂದ ಈ ಸಭೆ ನಡೆಸಲಾಗಿದೆ. ಚುನಾವಣೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ದಿನಾಂಕ ಘೋಷಣೆ ಮಾತ್ರ ಬಾಕಿಯಿದೆ ಎಂದು ಜಿಬಿಎ ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.ಜನಗಣತಿ ಹಾಗೂ ಮನೆಮನೆ ಸಮೀಕ್ಷೆ ಸೇರಿದಂತೆ ಕೆಲವು ಆಡಳಿತಾತ್ಮಕ ಕಾರ್ಯಗಳ ಹಿನ್ನೆಲೆಯಲ್ಲಿ ಸೂಕ್ತ ಸಮಯ ನೋಡಿಕೊಂಡು ದಿನಾಂಕ ನಿಗದಿಪಡಿಸಲು ಸೂಚಿಸಲಾಗಿದೆ. ಆದರೆ ಜೂನ್ 30ರೊಳಗೆ ದಿನಾಂಕ ಘೋಷಣೆ ಕಡ್ಡಾಯವಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಬೇಕಿದೆ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ, ಚುನಾವಣೆಯನ್ನು ಮುಂದೂಡುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಇಲ್ಲ. ಜೂನ್ 14ರಿಂದ 24ರೊಳಗಿನ ಅವಧಿಯಲ್ಲೇ ದಿನಾಂಕ ನಿಗದಿಪಡಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಸಿದ್ಧತೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದರು. ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ರಿಟರ್ನಿಂಗ್ ಅಧಿಕಾರಿಗಳು (RO), ಸಹಾಯಕ ಚುನಾವಣಾಧಿಕಾರಿಗಳು (AeRO) ಹಾಗೂ ಬೂತ್ ಮಟ್ಟದ ಅಧಿಕಾರಿಗಳ (BLO) ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದರು.ಇನ್ನೂ, ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿದ್ದರೆ ಅವುಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಬಿಎ ಚುನಾವಣೆ: ಜೂನ್ 14ರಿಂದ 24ರೊಳಗೆ ದಿನಾಂಕ ಘೋಷಣೆಗೆ ಸೂಚನೆ



