ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್ ನ ರಾಜೇಗೌಡ ಮತ್ತೆ ಶಾಸಕ
ಚಿತ್ರದುರ್ಗ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು, ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಲ್ಲದೆ, ಪ್ರಕರಣದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದೆ.
ಸುಪ್ರೀಂ ಕೋರ್ಟ್ನ ಈ ಆದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಹೈಕೋರ್ಟ್ ಆದೇಶದ ಮೇರೆಗೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಮುನ್ನಡೆ ಸಾಧಿಸಿ ಗೆಲುವು ದಾಖಲಿಸಿದ್ದರು. ಇದರ ಬೆನ್ನಲ್ಲೇ ಅವರು ಇತ್ತೀಚೆಗೆ ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು.
ಆದರೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶೃಂಗೇರಿ ಕ್ಷೇತ್ರದ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಜೊತೆಗೆ, ಅಂಚೆ ಮತ ಮರು ಎಣಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಈ ಆದೇಶದೊಂದಿಗೆ ಸದ್ಯಕ್ಕೆ ರಾಜೇಗೌಡ ಅವರ ಶಾಸಕ ಸ್ಥಾನ ಮುಂದುವರಿದಿದ್ದು, ಅವರು ಶಾಸಕರಾಗಿಯೇ ಕಾರ್ಯನಿರ್ವಹಿಸಲಿದ್ದಾರೆ.
ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. 2023ರ ಚುನಾವಣೆಯ ವೇಳೆ ಚಲಾವಣೆಯಾಗಿದ್ದ 1,822 ಅಂಚೆ ಮತಗಳಲ್ಲಿ ಜೀವರಾಜ್ ಅವರಿಗೆ 692 ಮತಗಳು ಹಾಗೂ ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು.
ಆದರೆ, ಮರು ಎಣಿಕೆಯ ಸಂದರ್ಭದಲ್ಲಿ ಜೀವರಾಜ್ ಅವರ ಮತಗಳು 690 ಆಗಿದ್ದರೆ, ರಾಜೇಗೌಡ ಅವರ ಮತಗಳು 314ಕ್ಕೆ ಇಳಿಕೆಯಾಗಿದ್ದವು. ಈ ಮೂಲಕ ರಾಜೇಗೌಡ ಅವರಿಗೆ 255 ಮತಗಳ ನಷ್ಟ ಉಂಟಾಗಿತ್ತು ಎಂದು ಚುನಾವಣಾಧಿಕಾರಿ ಗೌರವಶೆಟ್ಟಿ ಮಾಹಿತಿ ನೀಡಿದ್ದರು.



