ಬೆಂಗಳೂರು ಜನತೆಗೆ ಜಿಬಿಎ ಗುಡ್ ನ್ಯೂಸ್; ಮೇ 16ರಿಂದ 50 ಕಡೆಗಳಲ್ಲಿ ಇ-ಖಾತಾ ಮೇಳ ಆಯೋಜನೆ
ಬೆಂಗಳೂರು: ಸಿಲಿಕಾನ್ ಸಿಟಿಯ ನಿವಾಸಿಗಳಿಗೆ ಜಿಬಿಎ ಮಹತ್ವದ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಇ-ಖಾತಾ ಮಾಡಿಸದ ಆಸ್ತಿ ಮಾಲೀಕರಿಗೆ ವಿಶೇಷ ಮೇಳಗಳ ಮೂಲಕ ಸೇವೆ ಒದಗಿಸಲು ನಿರ್ಧರಿಸಿದೆ. ಇದೇ ಮೇ 16ರಿಂದ ಬೃಹತ್ ಇ-ಖಾತಾ ಮೇಳ ಆರಂಭವಾಗಲಿದೆ.ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 50 ಸ್ಥಳಗಳಲ್ಲಿ ಇ-ಖಾತಾ ಮೇಳ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಸುಮಾರು 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.ಮೇ 16ರ ಬಳಿಕ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ಸ್ಥಳದಲ್ಲೇ ಇ-ಖಾತಾಗೆ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದಾಗಿದೆ. ಈಗಾಗಲೇ ಸುಮಾರು 10 ಲಕ್ಷ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮೇಳದ ಪ್ರಮುಖ ಉದ್ದೇಶ ಸಾರ್ವಜನಿಕರಿಗೆ ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ ನೇರ ಸೇವೆ ಒದಗಿಸುವುದಾಗಿದೆ. ಇದರಿಂದ ಲಂಚದ ಬೇಡಿಕೆ ಹಾಗೂ ಅನಗತ್ಯ ವಿಳಂಬಕ್ಕೂ ಕಡಿವಾಣ ಬೀಳಲಿದೆ ಎನ್ನಲಾಗಿದೆ.ಇ-ಖಾತಾ ಪಡೆಯಲು ಸೇಲ್ ಡೀಡ್ ಅಥವಾ ಟೈಟಲ್ ಡೀಡ್, ಪ್ರಾಪರ್ಟಿ ತೆರಿಗೆ ರಸೀದಿ, ಎಸ್ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ, ಆಧಾರ್ ಕಾರ್ಡ್, ಇ-ಕೆವೈಸಿ, ಇಸಿ, ಬೆಸ್ಕಾಂ ಬಿಲ್ ಹಾಗೂ ಆಸ್ತಿಯ ಜಿಪಿಎಸ್ ಲೊಕೆಷನ್ ಸೇರಿದಂತೆ ಅಗತ್ಯ ದಾಖಲೆಗಳನ್ನು ತರಬೇಕು ಎಂದು ಸೂಚಿಸಲಾಗಿದೆ.



