ಕೆಪಿಎಸ್ ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: 1,500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಇಡಿ

Must read

ಕೆಪಿಎಸ್ ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: 1,500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಇಡಿ

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಸುಮಾರು 1,500 ಪುಟಗಳ ಚಾರ್ಜ್ಶೀಟ್ ಅನ್ನು ಶನಿವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ಮೊದಲು ಬಂಧನಕ್ಕೊಳಗಾಗಿದ್ದ ಅಮಾನತುಗೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಸವರಾಜ್ ಕನ್ನಾಳೆ ವಿರುದ್ಧ ಇಡಿ ಹಲವು ಗಂಭೀರ ಆರೋಪಗಳನ್ನು ಮಾಡಿದೆ.
ಚಾರ್ಜ್ಶೀಟ್ ಪ್ರಕಾರ, ಜನವರಿ 8 ಮತ್ತು 9ರಂದು ಆರೋಪಿಗಳು ಹಲವು ವಿಲ್ಲಾಗಳನ್ನು ಬುಕ್ ಮಾಡಿದ್ದರು. ಆರ್ಕಿಡ್ ನಿರ್ವಾಣ ಸೇರಿದಂತೆ ವಿವಿಧ ವಿಲ್ಲಾಗಳಲ್ಲಿ ಸುಮಾರು 20 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎಂದು ಇಡಿ ಆರೋಪಿಸಿದೆ.
ಜನವರಿ 7ರಂದು ಎಚ್ಪಿ ಪೆನ್ಡ್ರೈವ್ ಮೂಲಕ ಗ್ಯಾನೇಂದ್ರ ಕುಮಾರ್ ಅವರು ಬಸವರಾಜ್ ಕನ್ನಾಳೆಗೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಿದ್ದರು ಎನ್ನಲಾಗಿದೆ. ಎರಡು ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ 80 ಅಂಕಗಳ ಪ್ರಶ್ನೆಗಳನ್ನು ಪೆನ್ಡ್ರೈವ್ನಲ್ಲಿ ಸಂಗ್ರಹಿಸಿ ನೀಡಲಾಗಿತ್ತು. ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ಗ್ಯಾನೇಂದ್ರ ಕುಮಾರ್ ಮತ್ತು ಕನ್ನಾಳೆ ನಕಲು ಮಾಡಿದ್ದರು ಎಂದು ಇಡಿ ಆರೋಪಿಸಿದೆ. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ ಬಳಸಿ ಪ್ರಶ್ನೆಪತ್ರಿಕೆಯನ್ನು ನಕಲು ಮಾಡಲಾಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ನಕಲು ಮಾಡಿದ ದಾಖಲೆಗಳು ಯಾರಿಗೂ ಸಿಗಬಾರದು ಎಂಬ ಉದ್ದೇಶದಿಂದ ಅದೇ ದಿನ ಟ್ಯಾಬ್ಲೆಟ್ ಅನ್ನು ಪುಡಿಪುಡಿ ಮಾಡಿ ಬಿಸಾಡಲಾಗಿತ್ತು ಎಂಬ ಆರೋಪವೂ ಇದೆ.
ಇನ್ನು ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡುವುದಾಗಿ ಕನ್ನಾಳೆ, ಅಧಿಕಾರಿ ಗಂಗ್ವಾರ್ ಅವರನ್ನು ನಂಬಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ 80 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಕನ್ನಾಳೆ, ಬಳಿಕ ಅದನ್ನು 40 ಲಕ್ಷ ರೂಪಾಯಿಗೆ ಇಳಿಸಿದ್ದ ಎಂದು ಇಡಿ ಆರೋಪಿಸಿದೆ. ಒಟ್ಟಾರೆ 1.70 ಕೋಟಿ ರೂಪಾಯಿ ಹಣವನ್ನು ಗ್ಯಾನೇಂದ್ರ ಕುಮಾರ್ ಕನ್ನಾಳೆಯಿಂದ ಪಡೆದುಕೊಂಡಿದ್ದರು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
2025ರಲ್ಲಿ ಗ್ಯಾನೇಂದ್ರ ಕುಮಾರ್ ತಮ್ಮ ಅತ್ತಿಗೆಗೆ 15.39 ಲಕ್ಷ ರೂಪಾಯಿ ನೀಡಿದ್ದು, ಸಹೋದರನ ಬ್ಯಾಂಕ್ ಖಾತೆಗೆ 10.94 ಲಕ್ಷ ರೂಪಾಯಿ ವರ್ಗಾಯಿಸಿದ್ದರು ಎಂದು ಇಡಿ ಉಲ್ಲೇಖಿಸಿದೆ. ಅಕ್ರಮದಿಂದ ಬಂದ ಹಣವನ್ನು ಕಾನೂನುಬದ್ಧವಾಗಿ ಗಳಿಸಿದ ಸ್ವಂತ ಹಣವೆಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು ಎಂಬ ಆರೋಪವನ್ನೂ ಮಾಡಲಾಗಿದೆ.
ಅಧಿಕಾರಿಯ ಮನೆ ಮೇಲೆ ನಡೆದ ದಾಳಿ ವೇಳೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಖಲೆಗಳಲ್ಲಿ ಇಬ್ಬರು ಪಶುವೈದ್ಯಾಧಿಕಾರಿ ಹುದ್ದೆಯ ಅಭ್ಯರ್ಥಿಗಳ ಹೆಸರುಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಒಂದು ಹುದ್ದೆಗೆ ಮೂವರು ಅಭ್ಯರ್ಥಿಗಳ ಅನುಪಾತದಲ್ಲಿ (1:3) ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಕೆಪಿಎಸ್ಸಿಯ ಇತರ ಕೆಲವು ಅಧಿಕಾರಿಗಳೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯನ್ನು ಇಡಿ ವ್ಯಕ್ತಪಡಿಸಿದೆ. ಅಪರಾಧದಿಂದ ಬಂದ ಹಣವನ್ನು ಉಮೇಶ್ ಮತ್ತು ಓಂಕಾರ್ ಎಂಬವರಿಗೆ ವರ್ಗಾಯಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

- Advertisement -spot_img

More articles

- Advertisement -spot_img

Latest article