No menu items!
9.6 C
Munich
Tuesday, May 12, 2026

ಮೋದಿ ಮಾತಿಗೆ ಮನ್ನಣೆ; ಪೆಟ್ರೋಲ್ ಉಳಿಸಲು ಸೈಕಲ್​ನಲ್ಲೇ ನ್ಯಾಯಾಲಯಕ್ಕೆ ಬಂದ ಹೈಕೋರ್ಟ್ ನ್ಯಾಯಮೂರ್ತಿ

Must read

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಒಂದು ಕರೆ ನೀಡಿದರೆ ಅದಕ್ಕೆ ಎಂತಹ ಪವರ್ ಇರುತ್ತೆ ಅನ್ನೋದಕ್ಕೆ ಈಗ ಮಧ್ಯಪ್ರದೇಶದಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಜಾಗತಿಕವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಇಂಧನ ಉಳಿಸಿ ಅಂತ ಮೋದಿ ಮಾಡಿದ್ದ ಮನವಿಗೆ ಸಾಮಾನ್ಯ ಜನರಿಗಿಂತ ಮುಂಚೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಸ್ಪಂದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹೌದು, ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಾಲ್ ಅವರು ಇಂದು (ಮೇ12) ತಮ್ಮ ಐಷಾರಾಮಿ ಕಾರನ್ನು ಬಿಟ್ಟು ಸೈಕಲ್ ಏರಿ ಕೋರ್ಟ್‌ಗೆ ಆಗಮಿಸಿದ್ದಾರೆ. ಒಬ್ಬ ಹೈಕೋರ್ಟ್ ಜಡ್ಜ್ ಅಂದ್ರೆ ಅವರಿಗೆ ಇರುವ ಗೌರವ, ಪ್ರೋಟೋಕಾಲ್ ಮತ್ತು ಸೌಲಭ್ಯಗಳೇ ಬೇರೆ. ಆದರೆ, ದೇಶದ ಹಿತದೃಷ್ಟಿಯಿಂದ ಪ್ರಧಾನಿ ನೀಡಿದ ಕರೆಗೆ ಬೆಲೆ ಕೊಟ್ಟ ನ್ಯಾಯಮೂರ್ತಿಗಳು, ಜಬಲ್ಪುರದ ತಮ್ಮ ಮನೆಯಿಂದ ಸುಮಾರು 3 ಕಿಲೋಮೀಟರ್ ದೂರವಿರುವ ಹೈಕೋರ್ಟ್‌ಗೆ ಸೈಕಲ್ ಸವಾರಿ ಮಾಡಿಕೊಂಡು ಬರುವ ಮೂಲಕ ಸುದ್ದಿಯಾಗಿದ್ದಾರೆ.

ನ್ಯಾಯಮೂರ್ತಿ ಬನ್ಸಾಲ್ ಅವರು ಸೈಕಲ್ ತುಳಿಯುತ್ತಾ ಮುಂದೆ ಹೋಗುತ್ತಿದ್ದರೆ, ಅವರ ಭದ್ರತಾ ಸಿಬ್ಬಂದಿ ಕೂಡ ಗನ್ ಹಿಡಿದುಕೊಂಡು ಸೈಕಲ್‌ನಲ್ಲೇ ಅವರ ಹಿಂದೆ ಬಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಾದರಿ ಅಂದ್ರೆ ಇದು ಅಂತ ಜನ ಚಪ್ಪಾಳೆ ತಟ್ಟುತ್ತಿದ್ದಾರೆ.

ಪ್ರಧಾನಿ ಮೋದಿ ಇತ್ತೀಚೆಗೆ ತೆಲಂಗಾಣದ ಭಾಷಣದಲ್ಲಿ ಪೆಟ್ರೋಲ್ ಬಳಕೆ ತಗ್ಗಿಸಿ, ಸಾರ್ವಜನಿಕ ಸಾರಿಗೆ ಅಥವಾ ಎಲೆಕ್ಟ್ರಿಕ್ ವಾಹನ ಬಳಸಿ ಎಂದು ವಿನಂತಿಸಿದ್ದರು. “ನಾನು ಪ್ರಧಾನಿಯವರ ಮಾತನ್ನು ಗಮನಿಸಿದೆ. ಇಂಧನ ಉಳಿತಾಯ ಮಾಡುವುದು ಇವತ್ತಿನ ತುರ್ತು ಅಗತ್ಯ. ಸಾಮಾನ್ಯ ಜನರಿಗೆ ಈ ಬಗ್ಗೆ ಸಂದೇಶ ನೀಡಲು ನಾನೇ ಯಾಕೆ ಸೈಕಲ್ ಬಳಸಬಾರದು ಎಂದು ಅನಿಸಿತು. ಅದಕ್ಕೇ ಇವತ್ತು ಈ ಸಾಹಸ ಮಾಡಿದೆ” ಎಂದು ನ್ಯಾಯಮೂರ್ತಿ ಬನ್ಸಾಲ್ ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ನ್ಯಾಯಮೂರ್ತಿಗಳ ಈ ನಡೆ ಕೇವಲ ಫೋಟೋ ಶೂಟ್‌ಗೆ ಸೀಮಿತವಾಗಿರಲಿಲ್ಲ. ರಸ್ತೆಯಲ್ಲಿ ಹೋಗುವಾಗ ಸಾಮಾನ್ಯ ಜನರಂತೆ ಸಂಚಾರಿ ನಿಯಮ ಪಾಲಿಸುತ್ತಾ ಸಾಗಿದ ಅವರು, ಪರಿಸರ ಸಂರಕ್ಷಣೆ ಮತ್ತು ದೇಶದ ಆರ್ಥಿಕತೆಗೆ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನೆನಪಿಸಿದ್ದಾರೆ. 3 ಕಿಲೋಮೀಟರ್ ದೂರ ಸೈಕಲ್‌ನಲ್ಲಿ ಪ್ರಯಾಣಿಸುವುದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಪೆಟ್ರೋಲ್ ಖರ್ಚೂ ಉಳಿಯುತ್ತದೆ ಅನ್ನೋದು ಅವರ ಸಿಂಪಲ್ ಲಾಜಿಕ್. ಒಟ್ಟಿನಲ್ಲಿ, ದ್ವಾರಕಾ ಧೀಶ್ ಬನ್ಸಾಲ್ ಅವರ ಈ ಸೈಕಲ್ ಸವಾರಿಗೆ ಸದ್ಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -spot_img

More articles

- Advertisement -spot_img

Latest article