ಸೇಬು ಪ್ರಿಯರಿಗೆ ಶಾಕ್! ಅಕಾಲಿಕ ಮಳೆ, ಇಳುವರಿ ಕುಸಿತದಿಂದ ಬೆಲೆ ಏರಿಕೆ ಸಾಧ್ಯತೆ
ನವದೆಹಲಿ/ಬೆಂಗಳೂರು: ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಗ್ರಾಹಕರಿಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಾಗೂ ಬೆಳೆ ಪ್ರದೇಶದಲ್ಲಿ ಉಂಟಾದ ಕುಸಿತದಿಂದ ಈ ವರ್ಷ ಸೇಬು ಹಣ್ಣಿನ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ದೇಶದ ಪ್ರಮುಖ ಸೇಬು ಉತ್ಪಾದನಾ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಸೇಬು ಬೆಳೆ ತೀವ್ರ ಹಿನ್ನಡೆ ಅನುಭವಿಸಿದೆ. ಕಳೆದ ವರ್ಷ 6.99 ಲಕ್ಷ ಮೆಟ್ರಿಕ್ ಟನ್ ಸೇಬು ಉತ್ಪಾದನೆಯಾಗಿದ್ದರೆ, ಈ ಬಾರಿ ಅದು 2.63 ಲಕ್ಷ ಮೆಟ್ರಿಕ್ ಟನ್ಗೆ ಕುಸಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಸೇಬಿನ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ.
ಬೆಳೆ ಪ್ರದೇಶದಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. 2025ರಲ್ಲಿ 2.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೇಬು ಬೆಳೆಯಲಾಗಿದ್ದರೆ, ಈ ವರ್ಷ ಕೇವಲ 1.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸುಮಾರು 2.5 ಲಕ್ಷ ಕುಟುಂಬಗಳು ಸೇಬು ಕೃಷಿಯನ್ನೇ ಅವಲಂಬಿಸಿವೆ. ಆದರೆ, ಉತ್ಪಾದನಾ ವೆಚ್ಚ ಹೆಚ್ಚಳ, ಕೀಟನಾಶಕ ಹಾಗೂ ಔಷಧಿಗಳ ಬೆಲೆ ಏರಿಕೆ, ಜೊತೆಗೆ ಹವಾಮಾನ ವೈಪರೀತ್ಯದಿಂದ ಉಂಟಾದ ನಷ್ಟದ ಕಾರಣ ಅನೇಕ ರೈತರು ಈ ಬಾರಿ ಸೇಬು ಬೆಳೆ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಈ ವರ್ಷ ಸುಮಾರು 4.36 ಲಕ್ಷ ಮೆಟ್ರಿಕ್ ಟನ್ ಸೇಬಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಪರಿಣಾಮವಾಗಿ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಸೇಬಿನ ಸರಬರಾಜು ಕಡಿಮೆಯಾಗಿ, ಚಿಲ್ಲರೆ ಬೆಲೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೇಬಿನ ಉತ್ಪಾದನೆ ಕುಸಿದಿರುವುದು ರೈತರಿಗೆ ನಷ್ಟ ಉಂಟುಮಾಡುವುದರ ಜೊತೆಗೆ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ. ಹಬ್ಬಗಳ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಮುಂದಿನ ದಿನಗಳಲ್ಲಿ ಸೇಬಿನ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.



