ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಧರಣಿ 7ನೇ ದಿನಕ್ಕೆ; ಲಿಖಿತ ಆದೇಶಕ್ಕಾಗಿ ಪಟ್ಟು, ಸರ್ಕಾರದ ವಿರುದ್ಧ ಮಾನವ ಸರಪಳಿ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದಿಂದ ಲಿಖಿತ ಆದೇಶ ಹೊರಬರುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಕಾರ್ಯಕರ್ತೆಯರು ಸ್ಪಷ್ಟಪಡಿಸಿದ್ದಾರೆ. ಸೋಮವಾರ ಫ್ರೀಡಂ ಪಾರ್ಕ್ ಸುತ್ತಮುತ್ತ ಮಾನವ ಸರಪಳಿ ನಿರ್ಮಿಸಿದ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಸರ್ಕಾರದಿಂದ ಹಲವು ಭರವಸೆಗಳು ಸಿಕ್ಕಿದ್ದರೂ ಬೇಡಿಕೆಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬ ಅಸಮಾಧಾನ ಕಾರ್ಯಕರ್ತೆಯರಲ್ಲಿದೆ. ಹೀಗಾಗಿ ಈ ಬಾರಿ ಕೇವಲ ಭರವಸೆಗಳಿಗೆ ಸೀಮಿತವಾಗದೆ, ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಧಿಕೃತ ಲಿಖಿತ ಆದೇಶ ಪಡೆದುಕೊಂಡೇ ಧರಣಿ ಸ್ಥಳದಿಂದ ತೆರಳಲು ನಿರ್ಧರಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಸಿಎಂ ಮಾತು ಕೇಳಬೇಕು: ಜಿ. ಪರಮೇಶ್ವರ್
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಜಿ. ಪರಮೇಶ್ವರ್, ಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಕಾರ್ಯಕರ್ತೆಯರು ನಂಬಬೇಕು ಎಂದು ಹೇಳಿದ್ದಾರೆ.
ಸಿಎಂ ಈಗಾಗಲೇ ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗಳ ಮಾತನ್ನು ಕೇಳಬೇಕು. ನವೆಂಬರ್ 25ರಂದು ಸಂಜೆ ಸಿಎಂ ಬೆಂಗಳೂರಿಗೆ ಆಗಮಿಸಲಿದ್ದು, ಅವರು ಬಂದ ಬಳಿಕ ಈ ಕುರಿತು ಒಂದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಭರವಸೆಗೂ ಒಪ್ಪದ ಹೋರಾಟಗಾರ್ತಿಯರು
ಸರ್ಕಾರದ ಭರವಸೆಗಳ ಬಗ್ಗೆ ಈ ಬಾರಿ ಆಶಾ ಕಾರ್ಯಕರ್ತೆಯರು ವಿಶ್ವಾಸ ವ್ಯಕ್ತಪಡಿಸುತ್ತಿಲ್ಲ. ಈ ಹಿಂದೆ ನೀಡಿದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಈಗ ಲಿಖಿತ ಆದೇಶಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಸ್ಥಳಕ್ಕೆ ಆರೋಗ್ಯ ಸಚಿವರು ಭೇಟಿ ನೀಡಿದರೂ ಹೋರಾಟಗಾರ್ತಿಯರು ತಮ್ಮ ನಿಲುವನ್ನು ಬದಲಿಸಿಲ್ಲ. ಕೇವಲ ಭರವಸೆ ನೀಡಿದರೆ ಹೋರಾಟ ನಿಲ್ಲಿಸುವುದಿಲ್ಲ. ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ಆದೇಶದ ಪ್ರತಿ ಕೈಗೆ ಸಿಕ್ಕ ಬಳಿಕವೇ ಧರಣಿ ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ.
ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲು ನಿರ್ಧಾರ
ಫ್ರೀಡಂ ಪಾರ್ಕ್ನಲ್ಲಿ ಏಳನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಕಾರ್ಯಕರ್ತೆಯರು ಮಾನವ ಸರಪಳಿ ನಿರ್ಮಿಸುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸರ್ಕಾರದ ಗಮನ ಸೆಳೆಯಲು ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರವನ್ನೂ ಕೈಗೊಂಡಿದ್ದಾರೆ.
ನವೆಂಬರ್ 25ರಂದು ಮುಖ್ಯಮಂತ್ರಿ ಬೆಂಗಳೂರಿಗೆ ಆಗಮಿಸಿದ ಬಳಿಕ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಆಶಾ ಕಾರ್ಯಕರ್ತೆಯರ ಮುಂದಿನ ಹೋರಾಟದ ನಡೆ ನಿರ್ಧಾರವಾಗುವ ಸಾಧ್ಯತೆಯಿದೆ. ಆದರೆ ಲಿಖಿತ ಆದೇಶ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.



